ಹೊಸದಿಲ್ಲಿ,ಸೆ.10(DaijiworldNews/HR):ದೊಡ್ಡ-ದೊಡ್ಡ ರೆಸ್ಟೋರೆಂಟ್ಗಳಿಂದ ಆನ್ಲೈನ್ ಮೂಲಕ ತರಿಸಿಕೊಳ್ಳುತ್ತಿದ್ದ ನೀವು ಇನ್ನು ಮುಂದೆ ಬೀದಿ ಬದಿಯ ವ್ಯಾಪಾರಸ್ಥರಿಂದಲೂ ಮನೆ ಬಾಗಿಲಿಗೇ ತರಿಸಿಕೊಳ್ಳಬಹುದು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಬಗ್ಗೆ ಪ್ರಧಾನಮಂತ್ರಿ ಬೀದಿ ಬದಿಯ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯ ಫಲಾನುಭವಿಗಳ ಜತೆಗೆ ಆನ್ಲೈನ್ ಮೂಲಕ ಸಂವಾದ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಮಧ್ಯಪ್ರದೇಶದಲ್ಲಿ ಈ ಯೋಜನೆ ಸಮರ್ಪಕವಾಗಿ ಜಾರಿಯಾಗಿದ್ದು, ಒಂದು ಲಕ್ಷ ಮಂದಿ ಸದುಪಯೋಗ ಪಡೆದು ಕೊಂಡಿದ್ದಾರೆ, ಇದೊಂದು ಶ್ಲಾಘನೀಯ ಬೆಳವಣಿಗೆ ಎಂದು ಹೇಳಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ 4.5 ಲಕ್ಷ ಮಂದಿಗೆ ಯೋಜನೆಯ ಅನ್ವಯ ಗುರುತಿನ ಚೀಟಿ ವಿತರಿಸಿರುವುದು ಅತ್ಯುತ್ತಮ ಬೆಳವಣಿಗೆಯಾಗಿದ್ದು, ಡಿಜಿಟಲ್ ಪಾವತಿ ನಿಟ್ಟಿನಲ್ಲಿ ಬ್ಯಾಂಕ್ಗಳು ಆಧುನಿಕ ವ್ಯವಸ್ಥೆ ಗಳನ್ನು ಆರಂಭಿಸಿದ್ದು,ಅದನ್ನು ಬೀದಿ ಬದಿಯ ವ್ಯಾಪಾರಿಗಳು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಇನ್ನು ಭಾರತದಲ್ಲಿ ಬಡತನ ನಿರ್ಮೂಲನೆ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದ ಪ್ರಧಾನಿ, ದೇಶದಲ್ಲಿ ಬಡತನ ನಿರ್ಮೂಲನೆ ಬಗ್ಗೆ ಹಿಂದಿನ ಹಲವು ಸಂದರ್ಭಗಳಲ್ಲಿ ಪ್ರಸ್ತಾವಿಸಲಾಗಿತ್ತು. ಆದರೆ ಹಿಂದಿನ ಆರು ವರ್ಷಗಳಲ್ಲಿ ಬಡತನ ನಿರ್ಮೂಲನೆ ನಿಟ್ಟಿನಲ್ಲಿ ಯೋಜನಾಬದ್ಧವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.