ಅಂಬಾಲಾ ಸೆ.10(DaijiworldNews/HR): ಫ್ರಾನ್ಸ್ ನ ಐದು ಅತ್ಯಂತ ಪ್ರಬಲ ರಫೇಲ್ ಯುದ್ಧ ವಿಮಾನಗಳು ಇಂದು ಭಾರತದ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ.
ಇಂದು ಬೆಳಗ್ಗೆ 10 ಗಂಟೆಗೆ ಹರ್ಯಾಣದ ಅಂಬಾಲ ವಾಯು ನೆಲೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಐದು ರಫೇಲ್ ಸಮರ ವಿಮಾನಗಳು ಐಎಎಫ್ಗೆ ವಿಧ್ಯುಕ್ತವಾಗಿ ಸೇರ್ಪಡೆಗೊಂಡವು.
ಅಂಬಾಲಾ ವಾಯು ನೆಲೆಯಲ್ಲಿ ಇಂದು ನಡೆದ ಸಮಾರಂಭದಲ್ಲಿ ರಫೇಲ್ ಫೈಟರ್ ಜೆಟ್ಗಳನ್ನು ವಿದ್ಯುಕ್ತವಾಗಿ ಅನಾವರಣಗೊಳಿಸಿ, ಬಳಿಕ ಈ ಯುದ್ಧ ವಿಮಾನಗಳಿಗೆ ಸರ್ವ ಧರ್ಮ ವಿಶೇಷ ಪೂಜೆ ನೆರವೇರಿಸಲಾಯಿತು.
17 ಸ್ಕ್ವಾರ್ಡನ್ಗೆ ರಫೇಲ್ಗಳ ವಿದ್ಯುಕ್ತ ಸೇರ್ಪಡೆಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಫ್ರಾನ್ಸ್ನ ರಫೇಲ್ ಮತ್ತು ಭಾರತದ ತೇಜಸ್ ಸಮರ ವಿಮಾನಗಳು ಬಾನಂಗಳದಲ್ಲಿ ರೋಚಕ ಹಾರಾಟ ಪ್ರದರ್ಶನ ನಡೆಸಿದವು.
ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತದ ಮೂರು ಸಶಸ್ತ್ರ ಪಡೆಗಳ ಮಹಾ ದಂಡನಾಯಕನ್ ಜನರಲ್ ಬಿಪಿನ್ ರಾವ್, ಭಾರತೀಯ ವಾಯು ಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ, ರಕ್ಷಣಾ ಕಾರ್ಯದರ್ಶಿ ಡಾ.ಅಜಯ್ ಕುಮಾರ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ ಕಾರ್ಯದರ್ಶಿ ಡಾ. ಸತೀಶ್ ರೆಡ್ಡಿ ಮತ್ತು ರಕ್ಷಣಾ ಇಲಾಖೆಯ ಉನ್ನತಾಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.