ದಾವಣಗೆರೆ, ಸೆ.10(DaijiworldNews/HR): ಡ್ರಗ್ ದಂಧೆ ಪ್ರಕರಣದಲ್ಲಿ ಬಿಜೆಪಿಯವರೇ ಆಗಲಿ ಯಾರೇ ಆಗಲಿ ತೊಡಗಿದ್ದು ಕಂಡು ಬಂದರೆ ಸೂಕ್ತ ಕ್ರಮ ತೆಗದುಕೊಳ್ಳುವುದಕ್ಕೆ ಸರ್ಕಾರ ಬದ್ಧ ಎಂದು ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸಚಿವ ಡಾ. ನಾರಾಯಣಗೌಡ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ ಜಾಲದಲ್ಲಿ ರಾಜಕಾರಣಿಗಳ ಮಕ್ಕಳು ಇದ್ದಾರೆ ಎಂಬುದು ನಮಗಿಂತಲೂ ಮಾಧ್ಯಮದವರಿಗೆ ಹೆಚ್ಚಿನ ರೀತಿ ಗೊತ್ತಿದೆ. ತಡೆಗೆ ಮಾಧ್ಯಮದವರೂ ಸಹಕರಿಸಬೇಕು. ಡ್ರಗ್ ಬರೀ ದಂಧೆ ಅಲ್ಲ. ಅದೊಂದು ಮಾಫಿಯಾ. ಇದರ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ. ನಮ್ಮ ಸರ್ಕಾರ ಪೊಲೀಸರಿಗೆ ನೀಡಿದಷ್ಟು ಮುಕ್ತ ಅಧಿಕಾರ ಬೇರೆ ಯಾವ ಸರ್ಕಾರ ನೀಡಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ವಿಜಯೇಂದ್ರ ಜೊತೆಗೆ ರಾಗಿಣಿ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಕೆಲಸವನ್ನು ವಿರೋಧ ಪಕ್ಷದವರು ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಜೊತೆ ಅನೇಕರ ಫೋಟೋ ಇವೆ. ಅವುಗಳನ್ನು ಯಾಕೆ ಅಪ್ ಲೋಡ್ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.