ಗಾಂಧಿನಗರ, ಸೆ. 10 (DaijiworldNews/MB) : ಕೊರೊನಾ ಸೋಂಕನ್ನು ಅಭೂತಪೂರ್ವ ಸವಾಲು ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೊರೊನಾ ಸೊಂಕಿನ ವಿರುದ್ದ ಭಾರತವು ಯೋಜಿತ ಹೋರಾಟವನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ. ಹಾಗೆಯೇ ಲಸಿಕೆ ದೊರೆಯುವವರೆಗೂ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದು ತಿಳಿಸಿದ್ದಾರೆ.
ಗಾಂಧಿನಗರದ ಲೋಕಸಭಾ ಸದಸ್ಯ ಅಮಿತ್ ಶಾ ಅವರು ಕ್ಷೇತ್ರದಲ್ಲಿ 4,134 ಕೋಟಿ ಮೌಲ್ಯದ ವಿವಿಧ ಯೋಜನೆಗಳಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಉದ್ಘಾಟನೆ ಮಾಡಿದರು.
''ಕೊರೊನಾ ಸೋಂಕು ನಮಗೆ ಅಭೂತಪೂರ್ವ ಸವಾಲು. ಆದರೆ ನಾವು ಅದರ ವಿರುದ್ದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಯೋಜಿತ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದೇವೆ. ಇಡೀ ವಿಶ್ವವೇ ಭಾರತದ ಈ ಹೋರಾಟವನ್ನು ಗುರುತಿಸಿದೆ'' ಎಂದು ಹೇಳಿದ್ದಾರೆ.
ಹಾಗೆಯೇ ಕೊರೊನಾ ಸೋಂಕು ಅಭಿವೃದ್ದಿ ಕಾರ್ಯವನ್ನು ನಿಧಾನಗೊಳಿಸಿದ್ದರೂ ಕೂಡಾ ಗುಜರಾತ್ ಅಥವಾ ಭಾರತದ ಅಭಿವೃದ್ದಿಯನ್ನು ಈ ಸಾಂಕ್ರಾಮಿಕ ಹೆಚ್ಚು ಸಮಯಗಳ ಕಾಲ ತಡೆ ಹಿಡಿಯಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ಕೊರೊನಾ ಸೋಂಕಿಗೆ ತುತ್ತಾಗಿ ಗುಣಮುಖರಾದ ದೇಶದ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.