ಬೆಂಗಳೂರು, ಸೆ.10(DaijiworldNews/HR): ಡ್ರಗ್ಸ್ ದಂಧೆ ವಿರುದ್ಧ ರಾಜ್ಯ ಸರ್ಕಾರ ನಿರ್ಣಾಕ್ಷಣ್ಯ ಕ್ರಮಕ್ಕೆ ಮುಂದಾಗಿದ್ದು, ಈಗಾಗಲೇ ಪ್ರಭಾವಿಗಳ ಬಂಧನವೂ ಆಗಿದೆ. ಇನ್ನು ಹಲವು ಪ್ರಭಾವಿಗಳ ಹೆಸರು ಕೇಳಿ ಬರುತ್ತಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಡ್ರಗ್ ಮಾಫಿಯಾ ಮಟ್ಟ ಹಾಕಲು ರಾಜ್ಯದಲ್ಲಿ ಮತ್ತಷ್ಟು ಬಿಗಿಯಾದ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಅದಕ್ಕಾಗಿ ರಾಷ್ಟ್ರೀಯ ಕಾನೂನು ಶಾಲೆಯ ಪ್ರೋಫೆಸರ್ಗಳ ಸಲಹೆ ಪಡೆಯುತ್ತಿದ್ದೇವೆ. ರಾಷ್ಟ್ರೀಯ ಕಾನೂನು ಶಾಲೆ ಮುಖ್ಯಸ್ಥರ ಜೊತೆ ಮಾತಾಡಿದ್ದೇನೆ. ನಾನು ನಮ್ಮ ಕಾನೂನು ತಜ್ಞರ ಜೊತೆ ಈಗಾಗಲೇ ಚರ್ಚೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕಾನೂನು ಇನ್ನಷ್ಟು ಬಿಗಿ ಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಅದಕ್ಕಾಗಿ ಕಾನೂನು ಸಚಿವರ ಜೊತೆಗೂ ಚರ್ಚೆ ಮಾಡುತ್ತೇನೆ. ನಮ್ಮ ಸಿಸಿಬಿ ಪೊಲೀಸರು ವೃತ್ತಿಪರವಾಗಿ ಕ್ರಮಬದ್ಧವಾಗಿ ತನಿಖೆ ಮಾಡುತ್ತಿದ್ದಾರೆ. ತನಿಖೆಯ ಜಾಡು ಹಿಡಿದು ಎಷ್ಟೆ ದೊಡ್ಡವರಿರಲಿ ವಿಚಾರಣೆಗೆ ಒಳಪಡಿಸುವುದು ಖಂಡಿತ, ಕಾನೂನಿನ ಅನ್ವಯವೇ ಕಾರ್ಯಾಚರಣೆ ನಡೆಯುತ್ತಿದೆ ಎಂದರು.