ಮೈಸೂರು, ಸೆ.10(DaijiworldNews/HR): ರಾಜ್ಯದಲ್ಲಿರುವ ಡ್ರಗ್ಸ್ ದಂಧೆ ಪ್ರಕರಣದಲ್ಲಿ 32 ರಾಜಕಾರಣಿಗಳು ಶಾಮೀಲಾಗಿದ್ದು, ಇವರ ವಿರುದ್ಧ ಗೃಹಸಚಿವರಿಗೆ ನೇರವಾಗಿ ದೂರು ಸಲ್ಲಿಸಲಾಗುವುದು ಎಂದು ಶ್ರೀ ರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಇದೊಂದು ಕೇವಲ ಒಂದು ಮಾಫಿಯಾ ಅಲ್ಲ, ಪಾಕಿಸ್ತಾನದಿಂದ ದಾವೂದ್ ಇಬ್ರಾಹಿಂ ನಡೆಸುತ್ತಿರುವ ಡ್ರಗ್ಸ್ ಜಿಹಾದ್. ಈ ದಂಧೆಯಲ್ಲಿ ಸಿಲುಕಿರುವ ರಾಜಕಾರಣಿಗಳು ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ನಲ್ಲಿದ್ದಾರೆ. ಬಿಜೆಪಿಗೆ ಸೇರಿದ ಬಹುತೇಕ ಬಿಬಿಎಂಪಿ ಸದಸ್ಯರ ಪುತ್ರರು ಪಬ್ ಹಾಗೂ ಕ್ಲಬ್ಗಳನ್ನು ನಡೆಸುತ್ತಿದ್ದು, ಇಲ್ಲೆಲ್ಲ ಮಾದಕವಸ್ತುಗಳು ಸಿಗುತ್ತಿವೆ. ಡ್ರಗ್ಸ್ ಮಾಫಿಯಾವನ್ನು ಬೇರು ಸಮೇತ ಕಿತ್ತೆಸೆಯುತ್ತೇವೆ ಎಂದು ಹೇಳುವ ಮೂಲಕ ರಾಜಕಾರಣಿಗಳು ಬುರುಡೆ ಬಿಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಕರ್ನಾಟಕದ ಪೊಲೀಸರಿಗೆ ಬೆಂಗಳೂರಿನಲ್ಲಿ ಬೃಹತ್ ಮಟ್ಟದ ಮಾದಕವಸ್ತು ಇದೆ ಎಂಬ ಮಾಹಿತಿ ಗೊತ್ತಿರಲಿಲ್ಲವೇ? ಇಲ್ಲಿನ ಗುಪ್ತಚರ ಇಲಾಖೆ ಕತ್ತೆ ಕಾಯುತ್ತಿತ್ತಾ ಎಂಬುದಾಗಿ ಪ್ರಶ್ನಿಸಿದ್ದಾರೆ.
ನಟಿ ಸಂಜನಾ ಶಾಸಕ ಜಮೀರ್ ಅಹಮ್ಮದ್ ಸೇರಿದಂತೆ ಹಲವರ ಹೆಸರನ್ನು ಹೇಳಿರುವಾಗ ಅವರ ವಿರುದ್ಧ ಪೊಲೀಸರು ವಿಚಾರಣೆ ನಡೆಸುತ್ತಿಲ್ಲ. ಇದೊಂದು ರೀತಿಯ ಹೊಂದಾಣಿಕೆ ರಾಜಕೀಯ ಎಂದು ಎಂದಿದ್ದಾರೆ.
ಇನ್ನು ನಟಿ ಕಂಗನಾ ರನೋತ್ ಅವರ ಮನೆಯನ್ನು ನೆಲಸಮಗೊಳಿಸಿರುವುದು ಅಪರಾಧ. ಕಂಗನಾ ಅವರೊಂದಿಗೆ ಶ್ರೀರಾಮ ಸೇನೆ ಇದೆ ಎಂದು ಅವರು ಹೇಳಿದರು.