ಬೆಂಗಳೂರು, ಸೆ. 11 (DaijiworldNews/MB) : ''ಜಮೀರ್ ಅಹ್ಮದ್ ಖಾನ್ ದಡ್ಡ ಅಲ್ಲ, ಕಿಲಾಡಿ, ಆತ ಮುಸಲ್ಮಾನರಿಗೆ ಮಾತ್ರವಲ್ಲ ಎಲ್ಲಾ ವರ್ಗದ ಜನರಿಗೂ ಶಾಸಕ'' ಎಂದು ವಸತಿ ಸಚಿವ ಸೋಮಣ್ಣ ಕಾಂಗ್ರೆಸ್ ಶಾಸಕ ಜಮೀರ್ ಅವರನ್ನು ಹಾಡಿ ಹೊಗಳಿದ್ದಾರೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಗರಬಾವಿ ವಾರ್ಡ್ನಲ್ಲಿ ಈದ್ಗಾ ಮೈದಾನ ಕಾಂಪೌಂಡ್ ನಿರ್ಮಾಣಕ್ಕೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ''ಹಿಂದೂಗಳು ಎಲ್ಲರೂ ಒಳ್ಳೆಯವರಲ್ಲ, ಹಾಗೆಯೇ ಎಲ್ಲಾ ಮುಸ್ಲಿಮರು ಕೆಟ್ಟವರಲ್ಲ. ಎಲ್ಲಾ ಜಾತಿ ಧರ್ಮದಲ್ಲೂ ಒಳ್ಳೆಯವರು ಕೆಡ್ಡವರು ಇದ್ದಾರೆ'' ಎಂದು ಹೇಳಿದ ಅವರು, ''ದೇವರು ಇದ್ದಾನೆ ಎಂದಾದರೆ ಸೈತಾನ್ಗಳು ಕೂಡಾ ಇದ್ದೇ ಇರುತ್ತದೆ'' ಎಂದು ಕೂಡಾ ಹೇಳಿದ್ದಾರೆ.
''ನಾವು ಭಾರತೀಯರು ಹಿಂದೂ ಮುಸ್ಲಿಮರು ಒಂದೇ ಮನೆಯವರು. ನೀವು ಅಲ್ಲಾ ಎಂದರೆ ನಾವು ಶಿವ ಅಂತೀವಿ ದೇವರು ಒಬ್ಬನೇ. ಈ ಕೆಲಸಗಳಿಗೆ ಹಾಗೂ ಜಾತಿ - ಧರ್ಮಕ್ಕೆ ಯಾವುದೇ ಸಂಬಂಧವಿಲ್ಲ. ಒಬ್ಬ ಜನಪ್ರತಿನಿಧಿಯಾಗಿ ಇದು ನನ್ನ ಕರ್ತವ್ಯ'' ಎಂದು ಹೇಳಿದ್ದಾರೆ.