ಬೆಂಗಳೂರು, ಸೆ. 11 (DaijiworldNews/MB) : ಬೆಂಗಳೂರು ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದು ಅಂತರರಾಜ್ಯ ಗಾಂಜಾ ಮಾರಾಟ ಜಾಲವನ್ನು ಪತ್ತೆ ಹಚ್ಚಿ ಸುಮಾರು 4 ಕೋಟಿ ರೂ.ಗಳ ಮೌಲ್ಯದ 1,350 ಕೆಜಿ ಗಾಂಜಾವನ್ನು ಗುರುವಾರ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಗಾಂಜಾ ಮಾರಾಟ ಜಾಲವು ಒಡಿಶಾ, ತೆಲಂಗಾಣ ಮತ್ತು ಕರ್ನಾಟಕದಾದ್ಯಂತ ಹರಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಗಾಯತ್ರಿನಗರ ನಿವಾಸಿ ಜ್ಞಾನಶೇಖರ್ (37), ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಸಿದ್ದುನಾಥ ಲಾವಟೆ (22), ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಾಗನಾಥ (39), ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಚಂದ್ರಕಾಂತ್ (34) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕದ ಉತ್ತರ ಭಾಗದಲ್ಲಿ ಬೆಂಗಳೂರಿನಿಂದ ಸುಮಾರು 750 ಕಿ.ಮೀ ದೂರದಲ್ಲಿರುವ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನಲ್ಲಿರುವ ಕುರಿ ಸಾಕಾಣಿಕೆ ಜಮೀನಿನಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆದಾರರು ದೊಡ್ಡ ಸುರಂಗ ತೆಗೆದು ಅದರಲ್ಲಿ ಈ ಆರೋಪಿಗಳು ಒಟ್ಟು 1,350 ಕೆಜಿ ಗಾಂಜಾವನ್ನು 600 ಪ್ಯಾಕೆಟ್ಗಳಲ್ಲಿ ಇರಿಸಿದ್ದಾರೆ. ಹಳ್ಳವನ್ನು ಗಾಂಜಾ ಪ್ಯಾಕೆಟ್ಗಳಿಂದ ತುಂಬಿಸಿ ಮರದ ಹಲಗೆಯಿಂದ ಮುಚ್ಚಿ ನಂತರ ಮಣ್ಣಿನಿಂದ ಮುಚ್ಚಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಬೆಂಗಳೂರು ಪೊಲೀಸರ ಇತಿಹಾಸದಲ್ಲಿ ಇದು ದೊಡ್ಡ ಕಾರ್ಯಾಚರಣೆ ಎಂದು ತಿಳಿಸಿದ್ದಾರೆ.
"ದಿನನಿತ್ಯದ ತನಿಖೆಯಲ್ಲಿ ಶೇಷಾದಿಪುರಂ ಪೊಲೀಸ್ ಠಾಣೆ ಮಿತಿಯೊಳಗೆ ಆರೋಪಿಗಳು ಗಾಂಜಾ ಮಾರಾಟ ಮಾಡುವ ಸಣ್ಣ ಸುಳಿವು ದೊರಕಿತು. ಆದರೆ ಬಳಿಕ ನಡೆಸಿದ ವಿವರವಾದ ತನಿಖೆಯಿಂದ ಒಡಿಶಾದಿಂದ ಬೆಂಗಳೂರಿಗೆ ಗಾಂಜಾ ಹೇಗೆ ಸಾಗಾಟವಾಗುತ್ತಿದೆ ಎಂದು ತಿಳಿಯಿತು ಎಂದು ವಿವರಿಸಿದರು.
ಗಾಂಜಾವನ್ನು ಒಡಿಶಾದ ಆಂತರಿಕ ಕಾಡುಗಳಲ್ಲಿ ಬೆಳೆಸಲಾಗಿದ್ದು ತೆಲಂಗಾಣದ ಮೂಲಕ ಟ್ರಕ್ಗಳಲ್ಲಿ ಅಥವಾ ತರಕಾರಿಗಳನ್ನು ಸಾಗಿಸುವ ವಾಹನಗಳಲ್ಲಿ ಸಾಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
"ಈ ಆರೋಪಿಗಳು ಅದನ್ನು ಕುರಿ ಸಾಕಾಣಿಕೆ ಕೇಂದ್ರದಲ್ಲಿ ಹಳ್ಳದಲ್ಲಿ ಸಂಗ್ರಹಿಸುತ್ತಿದ್ದರು. ಏಕೆಂದರೆ ಅಂತಹ ದೂರದ ಪ್ರದೇಶದಲ್ಲಿ ಇಂತಹ ಯಾವುದೇ ಚಟುವಟಿಕೆ ನಡೆಯುತ್ತಿದೆ ಎಂದು ಯಾರಿಗೂ ಅನುಮಾನ ಬರುವುದಿಲ್ಲ. ಪ್ಯಾಕೆಟ್ಗಳನ್ನು ವ್ಯವಸ್ಥಿತವಾಗಿ ಪ್ಯಾಕ್ ಮಾಡಿ ಈ ಹಳ್ಳದಲ್ಲಿ ಜೋಡಿಸಿದ್ದಾರೆ" ಎಂದು ಅವರು ಹೇಳಿದರು.
ಈ ಕಾರ್ಯಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇಬ್ಬರು ಯುವ ಅಧಿಕಾರಿಗಳ ಬಗ್ಗೆ ತಿಳಿಸಿದ ಪಂತ್ ಅವರು, ನಬಿಸಾಹೇಬ್ ಮತ್ತು ರಾಜಸಾಬ್ ತಹಶೀಲ್ದಾರ್ ಅವರು ಹಗಲು ರಾತ್ರಿ ಪಟ್ಟುಬಿಡದೆ ಕೆಲಸ ಮಾಡುತ್ತಿದ್ದರು. ಡ್ರಗ್ ಮಾಫಿಯಾ ದಂಧೆಕೋರರ ಸಂಪರ್ಕ ಪತ್ತೆ ಹಚ್ಚಿ ಈ ಬೃಹತ್ ಪ್ರಮಾಣದ ಜಾಲವನ್ನು ಇವರು ಭೇದಿಸಿದ್ದಾರೆ ಎಂದು ಹೇಳಿದ್ದಾರೆ.