ಬೆಂಗಳೂರು, ಸೆ. 11 (DaijiworldNews/MB) : ರಾಜ್ಯದ ಬಿಜೆಪಿ ಸರ್ಕಾರದಂತೆ ಭಾರತದ ಇತಿಹಾಸದಲ್ಲಿ ಯಾರೂ ಕೂಡಾ ಡ್ರಗ್ಸ್ ವಿರುದ್ಧ ಇಂತಹ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಹೇಳಿದ್ದಾರೆ.
ಸೆಪ್ಟೆಂಬರ್ 10 ರ ಗುರುವಾರ ನಗರದ ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಮಾದಕವಸ್ತು ಪ್ರಕರಣದ ವಿಚಾರದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಹಿಂದಿನ ಸರ್ಕಾರ ಈ ವಿಷಯದ ಬಗ್ಗೆ ಕಣ್ಣು ಮುಚ್ಚಿ ಕುಳಿತಿತ್ತು. ಭಾರತದ ಇತಿಹಾಸದಲ್ಲಿ ಯಾರೂ ಕೂಡಾ ಇಂತಹ ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ. ಸಿಸಿಬಿ ಡ್ರಗ್ಸ್ ಮಾಫಿಯಾ ಬಗ್ಗೆ ತನಿಖೆ ನಡೆಸುತ್ತಿದೆ. ಇದರಲ್ಲಿ ಸಂಬಂಧ ಹೊಂದಿರುವ ಎಲ್ಲರನ್ನೂ ಬೆಳಕಿಗೆ ತರಲಾಗುವುದು ಎಂದು ಹೇಳಿದ್ದಾರೆ.
"ಕಳೆದ 10 ವರ್ಷಗಳಿಂದ ಡ್ರಗ್ಸ್ ದಂಧೆ ನಡೆಯುತ್ತಿದ್ದರೂ, ಹಿಂದಿನ ಸರ್ಕಾರಗಳು ಯಾವುದೇ ಗಮನವನ್ನು ಹರಿಸಿಲ್ಲ. ಆದರೆ ನಾವೀಗ ಸಮಗ್ರ ತನಿಖೆ ನಡೆಸುತ್ತೇವೆ" ಎಂದು ಆಶ್ವಾಸನೆ ನೀಡಿದ್ದಾರೆ.
ಹಾಗೆಯೇ ಈ ಸಂದರ್ಭದಲ್ಲಿ ಕೊರೊನಾ ಸಾಂಕ್ರಾಮಿಕದ ಬಗ್ಗೆ ಮಾತನಾಡಿದ ಅವರು, ಕೊರೊನಾ ಸೋಂಕು ನಿಯಂತ್ರಣದ ಕ್ರಮಗಳ ಬಗ್ಗೆ ಡಿಸಿ ಮತ್ತು ಸಿಇಒಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡಿದ್ದೇನೆ. ಮನೆ ಮನೆ ಸಮೀಕ್ಷೆ ಮುಂದುವರಿಸಲು ಸೂಚನೆ ನೀಡಲಾಗಿದೆ. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ವೆಂಟಿಲೇಟರ್, ಆಕ್ಸಿಜನ್, ಬೆಡ್ಗಳ ಕೊರತೆಯಿಲ್ಲ ಎಂದು ತಿಳಿಸಿದ್ದಾರೆ.
ಕೊರೊನಾ ಹಾಗೂ ಮಳೆಯಿಂದ ಉಂಟಾದ ಹಾನಿಯ ಬಗ್ಗೆ ಜಿಲ್ಲಾಧಿಕಾರಿಗೊಂದಿಗೆ ವಿಸ್ತೃತ ಚರ್ಚೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ ಸಿಎಂ ಪ್ರತಿ ಡಿಸಿ ಖಾತೆಯಲ್ಲಿ 25 ರಿಂದ 30 ಕೋಟಿ ರೂ. ಇದ್ದು ಹಣದ ಕೊರತೆಯಿಲ್ಲ ಎಂದು ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಸಂಪುಟ ವಿಸ್ತರಣೆಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಎಸ್ವೈ ಅವರು, "ಬಿಜೆಪಿ ಹೈಕಮಾಂಡ್ ನನಗೆ ಚರ್ಚೆಗೆ ಅವಕಾಶ ನೀಡಿದ ಕೂಡಲೇ ನಾಲ್ಕರಿಂದ ಐದು ದಿನಗಳಲ್ಲಿ ನಾನು ದೆಹಲಿಗೆ ಹೋಗುತ್ತೇನೆ. ಕ್ಯಾಬಿನೆಟ್ ವಿಸ್ತರಣೆ ಮತ್ತು ಪ್ರವಾಹ ಪರಿಹಾರದ ಬಗ್ಗೆ ಚರ್ಚಿಸುತ್ತೇನೆ" ಎಂದಿದ್ದಾರೆ.