ನವದೆಹಲಿ, ಸೆ 11 (DaijiworldNews/PY): ಸರ್ಕಾರವು ಕೊರೊನಾದ ನಡುವೆ ಪರೀಕ್ಷೆ ನಡೆಸಲು ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಈ ಪೈಕಿ ಕೊರೊನಾ ಲಕ್ಷಣ ಇರುವ ಅಭ್ಯರ್ಥಿಗಳನ್ನು ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತ ನಿಬಂಧನೆಯನ್ನು ತೆಗೆದುಹಾಕಿದೆ.
ಸಾಂದರ್ಭಿಕ ಚಿತ್ರ
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಪರಿಷ್ಕೃತ ಹೊಸ ಮಾರ್ಗಸೂಚಿಯ ಪ್ರಕಾರ, ಕೊರೊನಾ ರೋಗದ ಲಕ್ಷಣ ಇರುವ ಅಭ್ಯರ್ಥಿಯನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕಳುಹಿಸಬೇಕು. ಅಭ್ಯರ್ಥಿಯನ್ನು ಪರೀಕ್ಷೆಗೆ ಒಳಪಡಿಸಿ ಸೋಂಕಿನಿಂದ ಗುಣಮುಖರಾಗಿ ಅವರು ಆರೋಗ್ಯವಾಗಿದ್ದಾರೆ ಎಂದು ದೃಢಪಟ್ಟ ಬಳಿಕ ಆ ಅಭ್ಯರ್ಥಿಗೆ ಬೇರೆ ದಿನ, ಇತರ ವಿಧಾನಗಳಲ್ಲಿ ಪರೀಕ್ಷೆ ಬರೆಯಲು ಸಂಬಂಧಪಟ್ಟ ವಿಶ್ವ ವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಗಳು ಅವಕಾಶ ನೀಡಬೇಕು
ಕಂಟೈನ್ಮೆಂಟ್ ವಲಯದಿಂದ ಬರುವಂತಹ ಅಭ್ಯರ್ಥಿಳಿಗೆ ಪರೀಕ್ಷಾ ಕೇಂದ್ರದಲ್ಲಿ ಭೌತಿಕವಾಗಿ ಪರೀಕ್ಷೆಗೆ ಹಾಜರಾಗುವಂತಹ ಅವಕಾಶವಿಲ್ಲ. ಇದರ ಬದಲು ಅವರಿಗೆ ಸಂಬಂಧಪಟ್ಟ ಶಿಕ್ಷಣ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯ ಬೇರ ದಿನ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಿಕೊಡುತ್ತವೆ ಎಂದು ಸೆಪ್ಟೆಂಬರ್ 2ರಂದು ಬಿಡುಗಡೆಯಾದ ಮಾರ್ಗಸೂಚಿ ತಿಳಿಸಲಾಗಿತ್ತು.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾಸ್ಕ್ ಸ್ಯಾನಿಟೈಸರ್, ಸೋಪ್ ಮುಂತಾದ ಸುರಕ್ಷತಾ ವಸ್ತುಗಳನ್ನು ಕಲ್ಪಿಸುವಂತ ವ್ಯವಸ್ಥೆಯನ್ನು ಶಿಕ್ಷಣ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದ ಅಧಿಕಾರಿಗಳು ಮಾಡಬೇಕು ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶ ಮಾಡುವ ಮೊದಲು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಸ್ವಯಂ ದೃಢೀಕರಣ ಪತ್ರ ನೀಡಬೇಕು. ಅಲ್ಲದೇ, ಪ್ರವೇಶ ಪತ್ರ ನೀಡುವ ವೇಳೆ ಆರೋಗ್ಯ ಸ್ಥಿತಿಯ ಬಗ್ಗೆ ಅರ್ಜಿ ಭರ್ತಿ ಮಾಡಿ ನೀಡಬೇಕು.