ಬೆಂಗಳೂರು, ಸೆ. 11 (DaijiworldNews/MB) : ಮಂಡ್ಯದ ಅರಕೇಶ್ವರ ದೇವಾಲಯದ ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆಗೈಯಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಹತ್ಯೆಯಾದ ಮೂವರು ಅರ್ಚಕರ ಕುಟುಂಬಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ತಲಾ 5 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಮಂಡ್ಯದ ಅರಕೇಶ್ವರ ದೇವಸ್ಥಾನದ ಪೂಜಾರಿಗಳಾಗಿದ್ದ ಶ್ರೀ ಗಣೇಶ್, ಶ್ರೀ ಪ್ರಕಾಶ್ ಮತ್ತು ಶ್ರೀ ಆನಂದ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ದೇವಸ್ಥಾನದ ಹುಂಡಿಯನ್ನು ಕಳ್ಳತನ ಮಾಡಿರುವ ವಿಷಯ ತಿಳಿದು ಅತ್ಯಂತ ನೋವಾಗಿದೆ'' ಎಂದು ಸಂತಾಪ ಸೂಚಿಸಿದ್ದಾರೆ.
ಹಾಗೆಯೇ, ''ಹತ್ಯೆಗೊಳಗಾದ ದೇವಸ್ಥಾನದ ಪೂಜಾರಿಗಳ ಕುಟುಂಬಕ್ಕೆ ತಲಾ 5.00 ಲಕ್ಷ ರೂ. ಪರಿಹಾರ ನೀಡಲಾಗುವುದು. ತಪ್ಪಿತಸ್ಥರ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು'' ಎಂದು ತಿಳಿಸಿದ್ದಾರೆ.
ಮುಜರಾಯಿ ಇಲಾಖೆಗೆ ಸೇರಿರುವ ಮಂಡ್ಯದ ಅರಕೇಶ್ವರ ದೇವಾಲಯದ ಮೂವರು ಅರ್ಚಕರಾದ ಗಣೇಶ್ (35), ಪ್ರಕಾಶ್ (36), ಆನಂದ್ (33) ಎಂಬವರು ದೇವಾಲಯದ ಪೂಜೆಯೊಂದಿಗೆ ದೇವಾಲಯದ ಕಾವಲು ಕೂಡಾ ಕಾಯುತ್ತಿದ್ದರು. ಗುರುವಾರ ರಾತ್ರಿ ಅರ್ಚಕರನ್ನು ಹತ್ಯೆ ಮಾಡಿ ಹುಂಡಿಯ ಹಣವನ್ನು ದೋಚಿರುವ ಕಳ್ಳರು, ಹುಂಡಿಯಲ್ಲಿನ ನೋಟುಗಳನ್ನು ಮಾತ್ರ ತೆಗೆದುಕೊಂಡು ಚಿಲ್ಲರೆ ಇರುವ ಹುಂಡಿಯನ್ನು ಆವರಣದಲ್ಲಿ ಎಸೆದು ಹೋಗಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.