ಕೊಟ್ಟಾಯಂ, ಸೆ. 11 (DaijiworldNews/MB) : ತಿರುವವರ್ಪುವಿನಲ್ಲಿ ಒಂದು ಕುಟುಂಬದ ಎಲ್ಲರೂ ಕೊರೊನಾ ಸೋಂಕಿಗೆ ತುತ್ತಾಗಿದ್ದು ಈ ಕುಟುಂಬ ಒಡೆತನದ ಹಸುಗಳನ್ನು ನೋಡಿಕೊಳ್ಳಲು ಯಾರೂ ಇಲ್ಲದ ಪರಿಸ್ಥಿತಿ ಉಂಟಾಗಿತ್ತು. ಈ ಹಿನ್ನೆಲೆ ಈ ಹಸುಗಳ ಆರೈಕೆಗೆ ಸರ್ಕಾರವು ನಿರ್ಧರಿಸಿದ್ದು ಜಿಲ್ಲಾಧಿಕಾರಿ ಅಂಜನಾ ಅವರು ಎಲ್ಲಾ ಐದು ಹಸುಗಳನ್ನು ಡೈರಿ ಅಭಿವೃದ್ಧಿ ಇಲಾಖೆಯ ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಿದ್ದಾರೆ.
ಸಾಂದರ್ಭಿಕ ಚಿತ್ರ
8 ಜನರಿರುವ ಈ ಕುಟಂಬದಲ್ಲಿ 7 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಬುಧವಾರ ಕುಟುಂಬದ ಎಂಟನೇ ಸದಸ್ಯನಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಅವರನ್ನು ಕೊರೊನಾ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಈ ಕಾರಣದಿಂದಾಗಿ ಹಸುಗಳನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಹಾಲು ನೀಡುವ ಹಸುಗಳು ಇದ್ದು ಆ ಹಸುಗಳ ದಿನಂಪ್ರತಿ ಹಾಲು ಕರೆಯದಿದ್ದರೆ ಹಸುವಿನ ಆರೋಗ್ಯಕ್ಕೆ ತೊಂದರೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬಳಿ ಬಂದ ಹಸುವಿನ ಮಾಲೀಕರು ಸಹಾಯ ಮಾಡುವಂತೆ ಮನವಿ ಮಾಡಿದ್ದರು.
ಮಾಲೀಕರ ಮನವಿಯಂತೆ ಕೂಡಲೇ ಹಸುಗಳ ರಕ್ಷಣೆಗೆ ಮುಂದಾದ ಜಿಲ್ಲಾಧಿಕಾರಿ ಹಸುಗಳನ್ನು ರಕ್ಷಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಡಿಸಿ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಿಗೆ ಆದೇಶಿಸಿದರು. ನಂತರ ಹಸುಗಳನ್ನು ಪಂಚಾಯತ್ ಮತ್ತು ತಿರುವಪ್ಪು ಹಾಲು ಉತ್ಪಾದಕರ ಸಮಾಜದ ಸಹಾಯದಿಂದ ಆಶ್ರಯಕ್ಕೆ ಸ್ಥಳಾಂತರಿಸಲಾಯಿತು.
ಇನ್ನು ಪಂಚಾಯತ್ ಅಧಿಕಾರಿಗಳು ಈ ಹಸುಗಳ ಮಾಲೀಕರು ಸೋಂಕಿನಿಂದ ಗುಣಮುಖರಾಗಿ ಈ ಹಸುಗಳನ್ನು ತಮ್ಮ ಮನೆಗೆ ಕರೆದೊಯ್ದ ಬಳಿಕವೂ ಈ ತಾತ್ಕಾಲಿಕ ಆಶ್ರಯವನ್ನು ಹೀಗೆಯೇ ಇರಿಸಲಾಗುವುದು. ಒಂದು ವೇಳೆ ಇದೇ ರೀತಿಯ ಪರಿಸ್ಥಿತಿ ಬೇರೆಡೆ ಇದ್ದರೆ ಅವರ ದನಗಳನ್ನು ಸಹ ಆಶ್ರಯಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಡೈರಿ ಅಭಿವೃದ್ಧಿ ವಿಭಾಗದ ಉಪ ನಿರ್ದೇಶಕ ಕೆ ಜಿ ಶ್ರೀಲತಾ ಅವರು, ಯಾರ ಮನೆಯಲ್ಲಿ ಎಲ್ಲಾ ಕುಟುಂಬ ಸದಸ್ಯರು ಚಿಕಿತ್ಸೆ ಪಡೆಯುತ್ತಿದ್ದರೋ ಅವರು ತಮ್ಮ ಜಾನುವಾರುಗಳನ್ನು ನೋಡಿಕೊಳ್ಳಲು ವಿಪತ್ತು ನಿರ್ವಹಣಾ ಪ್ರಾಧಿಕಾರವು ಇಲಾಖೆಗೆ ವಹಿಸಬೇಕು ಎಂದು ತಿಳಿಸಿದ್ದಾರೆ. ಹಾಗೆಯೇ ಅಗತ್ಯವಿರುವವರಿಗೆ ವ್ಯವಸ್ಥೆ ಮಾಡುವಂತೆ ಎಲ್ಲಾ ಹಾಲು ಸಂಘಗಳಿಗೆ ನಿರ್ದೇಶಿಸಲಾಗಿದೆ ಎಂದು ಕೂಡಾ ತಿಳಿಸಿದ್ದಾರೆ.