ಬೆಂಗಳೂರು, ಸೆ. 11 (DaijiworldNews/MB) : ಕೊರೊನಾ ಕಾರಣದಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯದ ಖಾಸಗಿ ಅನುದಾನರಹಿತ ಶಾಲೆಗಳ 3.5 ಲಕ್ಷ ಶಿಕ್ಷಕರಿಗೆ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಖಾಸಗಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಈಗಾಗಲೇ ಅವಕಾಶ ನೀಡಲಾಗಿದ್ದು ಸಂಕಷ್ಟದಲ್ಲಿರುವ ಖಾಸಗಿ ಶಾಲೆಯ ಶಿಕ್ಷಕರಿಗೆ ಯಾವುದಾದರೂ ರೂಪದಲ್ಲಿ ನೆರವು ನೀಡುವುದಂತು ಸರ್ಕಾರ ದೃಢ ನಿರ್ಧಾರ ಎಂದು ಹೇಳಿದರು.
ಇಲಾಖೆಯು ರಾಜ್ಯದ ಯಾವ ಮಗುವು ಶಿಕ್ಷಣದಿಂದ ವಂಚಿತರಾಗದಂತೆ ಕಾರ್ಯ ನಿರ್ವಹಿಸಲಿದೆ. ಕಳೆದ ವರ್ಷ ಹೇಳಿದಂತೆ ಶಿಕ್ಷಕ ಸ್ನೇಹಿಯಾದ ವರ್ಗಾವಣೆ ನೀತಿ ಜಾರಿಗೆ ತರಲಾಗಿದೆ ಎಂದು ಹೇಳಿದ ಅವರು, ಕೊರೊನಾ ಲಾಕ್ಡೌನ್ ಬಳಿಕ ಈಗ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಶಾಲೆ ಪುನರ್ ಆರಂಭಕ್ಕಾಗಿ ಉತ್ಸಾಹದಿಂದ ಇದ್ದಾರೆ. ಕೇಂದ್ರ ಸರ್ಕಾರ ನಿಯಮಾವಳಿ ಬಿಡುಗಡೆ ಮಾಡಿದ ಕೂಡಲೇ ರಾಜ್ಯದಲ್ಲಿ ಶಾಲೆ ಆರಂಭ ಎಂದು ಹೇಳಿದರು.