ಮುಂಬೈ, ಸೆ. 11 (DaijiworldNews/MB) : ಮಹಾರಾಷ್ಟ್ರ ಸರ್ಕಾರದಲ್ಲಿ ಮೈತ್ರಿ ಹೊಂದಿರುವ ಕಾಂಗ್ರೆಸ್ ತನ್ನ ವಿವಾದದಲ್ಲಿ ಮಧ್ಯ ಪ್ರವೇಶ ಮಾಡಿ ನ್ಯಾಯ ಒದಗಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಲ್ಲಿ ಆಗ್ರಹ ಮಾಡಿರುವ ನಟಿ ಕಂಗನಾ ರಣಾವತ್ ಇತಿಹಾಸವು ನಿಮ್ಮ ಮೌನವನ್ನು ನಿರ್ಣಯಿಸುತ್ತದೆ ಎಂದು ಸಿಡಿಮಿಡಿಗೊಂಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಂಗನಾ, ಆತ್ಮೀಯ ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ, ಒಬ್ಬ ಹೆಣ್ಣಾಗಿ ನಿಮ್ಮದೇ ಮಹಾರಾಷ್ಟ್ರ ಸರ್ಕಾರ ನನಗೆ ನೀಡುತ್ತಿರುವ ಕಿರುಕುಳದಿಂದ ನೀವು ದುಃಖಿತರಾಗಿದ್ದೀರಾ? ಡಾ.ಅಂಬೇಡ್ಕರ್ ಅವರು ನಮಗೆ ನೀಡಿದ ಸಂವಿಧಾನದ ತತ್ವಗಳನ್ನು ಎತ್ತಿಹಿಡಿಯುವಂತೆ ನಿಮ್ಮ ಸರ್ಕಾರವನ್ನು ಕೋರಲು ನಿಮ್ಮಿಂದ ಸಾಧ್ಯವಿಲ್ಲವೇ? ಪ್ರಶ್ನಿಸಿದ್ದಾರೆ.
ನೀವು ವಿದೇಶದಲ್ಲಿ ಬೆಳೆದು ಭಾರತದಲ್ಲಿ ವಾಸಿಸುತ್ತಿದ್ದೀರಿ. ಮಹಿಳೆಯರ ಹೋರಾಟಗಳ ಬಗ್ಗೆ ನಿಮಗೆ ತಿಳಿದಿರಬಹುದು. ನಿಮ್ಮ ಸ್ವಂತ ಸರ್ಕಾರವು ಮಹಿಳೆಯರಿಗೆ ಕಿರುಕುಳ ನೀಡುತ್ತಿರುವಾಗ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿರುವಾಗ ನಿಮ್ಮ ಮೌನ ಮತ್ತು ಉದಾಸೀನತೆಯನ್ನು ಇತಿಹಾಸವು ನಿರ್ಣಯಿಸುತ್ತದೆ. ನೀವು ಮಧ್ಯಪ್ರವೇಶಿಸುವಿರಿ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಬಾಲಾ ಸಾಹೇಬ್ ಠಾಕ್ರೆ ಅವರ ವಿಡಿಯೋದ ತುಣುಕೊಂದನ್ನು ಹಾಕಿರುವ ಅವರು, ಗ್ರೇಟ್ ಬಾಲಾ ಸಾಹೇಬ್ ಠಾಕ್ರೆ ನನ್ನ ಅತ್ಯಂತ ಮೆಚ್ಚಿನ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಶಿವಸೇನೆಯು ಬದಲಾಗಿ ಕಾಂಗ್ರೆಸ್ ಆಗಲಿದೆ ಎಂಬುದು ಅವರ ಭಯವಾಗಿತ್ತು ಎಂದು ಹೇಳಿದ್ದಾರೆ.
ಸುಶಾಂತ್ ಸಿಂಗ್ ಸಾವು ಪ್ರಕರಣದ ಬಗ್ಗೆ ಮಾತನಾಡುವ ಮೂಲಕ ಭಾರೀ ಸುದ್ದಿಯಾಗಿದ್ದ ಕಂಗನಾ ಬಳಿಕ ಮಹಾರಾಷ್ಟ್ರವನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದರು. ಈ ವಿಚಾರದಲ್ಲೇ ಮಹಾರಾಷ್ಟ್ರ ಹಾಗೂ ಕಂಗನಾ ವಿರುದ್ದ ಜಟಾಪಟಿ ನಡೆಯುತ್ತಲ್ಲೇ ಇದೆ. ಏತನ್ಮಧ್ಯೆ ಮುಂಬೈ ಮಹಾನಗರ ಪಾಲಿಕೆ ಕಂಗನಾ ಮುಂಬೈಯ ಬಾಂದ್ರಾದ ಪಾಲಿ ಹಿಲ್ಸ್ ನಲ್ಲಿರುವ ಕಂಗನಾ ಬಂಗಲೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಜೆಸಿಬಿ ಮೂಲಕ ನೆಲಸಮ ಮಾಡುವ ಕಾರ್ಯ ಮಾಡಿದೆ. ಕೂಡಲೇ ಕಂಗನಾ ಮುಂಬೈ ಹೈಕೋರ್ಟ್ ಮೊರೆ ಹೋಗಿದ್ದು ಶೀಘ್ರ ವಿಚಾರಣೆ ನಡೆಸಿದ ಕೋರ್ಟ್ ತಡೆಯಾಜ್ಞೆ ತಂದಿತ್ತು.