ಚಿಕ್ಕಮಗಳೂರು, ಸೆ 11 (DaijiworldNews/PY): ತಂದೆಯೋರ್ವ ತನ್ನ ಏಳು ತಿಂಗಳ ಮಗುವನ್ನು ನೀರು ತುಂಬಿದ್ದ ಬಕೆಟ್ನಲ್ಲಿ ಮುಳುಗಿಸಿ ಹತ್ಯೆಗೈದ ಘಟನೆ ಕಡೂರು ತಾಲೂಕಿನ ದೊಡ್ಡಪೇಟೆ ಬಡಾವಣೆಯಲ್ಲಿ ನಡೆದಿದೆ.
ಆರೋಪಿಯನ್ನು ವಕೀಲ ಉಮಾಶಂಕರ್ ಎನ್ನಲಾಗಿದೆ.
ಉಮಾಶಂಕರ್ ಮೂರು ವರ್ಷಗಳ ಹಿಂದೆ ಕಡೂರು ನ್ಯಾಯಾಲಯದಲ್ಲಿ ಡಿ ದರ್ಜೆ ನೌಕರಳಾಗಿದ್ದ ಮಂಜುಳ ಎಂಬಾಕೆಯನ್ನು ಪ್ರೀತಿಸಿ ಎರಡನೇ ವಿವಾಹವಾಗಿದ್ದ. ಏಳು ತಿಂಗಳ ಹಿಂದೆ ಈಕೆಗೆ ಹೆಣ್ಣು ಮಗು ಹುಟ್ಟಿತ್ತು. ಹೆಣ್ಣು ಮಗು ಎಂದ ಕಾರಣಕ್ಕೆ ಉಮಾಶಂಕರ್ ಪತ್ನಿಗೆ ಹಿಂಸೆ ನೀಡುತ್ತಿದ್ದ.
ಎಂದಿನಂತೆ ಮಂಜುಳಾ ಕೆಲಸಕ್ಕೆ ತೆರಳಿದ್ದ ಸಂದರ್ಭ ಉಮಾಶಂಕರ್ ಏಳು ತಿಂಗಳ ಪುಟ್ಟ ಮಗುವನ್ನು ನೀರು ತುಂಬಿದ್ದ ಬಕೆಟ್ನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾನೆ. ಈ ಬಗ್ಗೆ ಮಂಜುಳ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಉಮಾಶಂಕರ್ನನ್ನು ಬಂಧಿಸಿದ್ದಾರೆ.
ಇನ್ನು ಉಮಾಶಂಕರ್ನ ಮೊದಲ ಪತ್ನಿಗೆ ಗಂಡು ಮಗುವಿದೆ. ಆದರೆ, ಉಮಾಶಂಕರ್ ವಿಚ್ಛೇದನ ಪಡೆದಿರಲಿಲ್ಲ. ಈ ಕಡೆ ಎರಡನೇ ಹೆಂಡಿತಿಗೆ ಹೆಣ್ಣು ಮಗು ಜನಿಸಿದ್ದು, ಇನ್ನೇನು ಆಸ್ತಿ ತಪ್ಪಿ ಹೋಗುತ್ತದೆ ಎನ್ನುವ ಕಾರಣದಿಂದ ಏಳು ತಿಂಗಳ ಮಗು ಲಾವಣ್ಯಾಳನ್ನು ತಂದೆಯೇ ಹತ್ಯೆ ಮಾಡಿರುವುದಾಗಿ ಪ್ರಾಥಮಿಕ ವರದಿಯಲ್ಲಿ ಮಾಹಿತಿ ದೊರೆತಿದೆ.