ಬೆಂಗಳೂರು, ಸೆ. 11 (DaijiworldNews/MB) : ಡ್ರಗ್ಸ್ ದಂಧೆಗೆ ಸಂಬಂಧಿಸಿ ತಮಗೆ ತಿಳಿದಿರುವ ಮಾಹಿತಿಯನ್ನು ನೀಡುವಂತೆ ಸಿಸಿಬಿ ಪೊಲೀಸರು ಚಿತ್ರೋದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರಿಗೆ ನೋಟಿಸ್ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಅವರು, ಶನಿವಾರ ಬೆಳಿಗ್ಗೆ ಕಚೇರಿಗೆ ಬರುವಂತೆ ಸಂಬರಗಿ ಅವರಿಗೆ ನೋಟಿಸ್ ನೀಡಲಾಗಿದ್ದು ಮಾಹಿತಿ ಪಡೆದು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಡ್ರಗ್ ದಂಧೆಯ ವಿಚಾರವಾಗಿ ಮಾತನಾಡಿದ್ದ ಪ್ರಶಾಂತ್ ಸಂಬರಗಿ ಅವರು, ಶ್ರೀಲಂಕಾದ ಕೊಲಂಬೋದಲ್ಲಿ ಸಂಜನಾ ಮತ್ತು ಶಾಸಕ ಜಮೀರ್ ಅಹ್ಮದ್ ಅವರು 2019ರ ಜುಲೈ 8 ರಂದು ಇದ್ದರು. ನೀವು ಜೂಜು ಹಾಗೂ ಡ್ರಗ್ಸ್ನಲ್ಲಿ ಭಾಗಿಯಾಗದಿದ್ದರೆ ನಿಮಗ್ಯಾಕೆ ಭಯ ಎಂದು ಹೇಳಿದ್ದರು.
ನಟಿ ಸಂಜನಾ ಗಲ್ರಾನಿ ಹಾಗೂ ಶಾಸಕ ಜಮೀರ್ ಅವರು ಈ ಆರೋಪವನ್ನು ಅಲ್ಲಗಳೆದಿದ್ದು ಡ್ರಗ್ಸ್ ಮಾಫಿಯಾದಲ್ಲಿ ಸಿಸಿಬಿ ಪೊಲೀಸರು ಬಂಧಿಸಿರುವ ನಟಿ ಸಂಜನಾ ಅವರೊಂದಿಗೆ ನಾನು ಕೊಲಂಬೋಗೆ ಹೋಗಿದ್ದು ಸಾಬೀತಾದರೆ ನನ್ನ ಆಸ್ತಿಯೆಲ್ಲ ಸರ್ಕಾರಕ್ಕೆ ಬರೆದುಕೊಡುತ್ತೇನೆ ಎಂದು ಜಮೀರ್ ಹೇಳಿದ್ದರು. ಹಾಗೆಯೇ ಪ್ರಶಾಂತ್ ಸಂಬರಗಿ ವಿರುದ್ಧ ಜಮೀರ್ ಅಹ್ಮದ್ ನೀಡಿದ ದೂರಿನ ಅನ್ವಯ ಚಾಮರಾಜಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದೀಗ ಡ್ರಗ್ಸ್ ದಂಧೆಗೆ ಸಂಬಂಧಿಸಿ ತಮಗೆ ತಿಳಿದಿರುವ ಮಾಹಿತಿಯನ್ನು ನೀಡುವಂತೆ ಸಿಸಿಬಿ ಪೊಲೀಸರು ಪ್ರಶಾಂತ್ ಸಂಬರಗಿ ಅವರಿಗೆ ನೋಟಿಸ್ ನೀಡಿದ್ದಾರೆ.