ಬೆಂಗಳೂರು, ಸೆ.12(DaijiworldNews/HR): ಡ್ರಗ್ಸ್ ಅಂಶ ಪತ್ತೆಗಾಗಿ ರಾಗಿಣಿಗೆ ವೈದ್ಯರು ಪರೀಕ್ಷೆಗಾಗಿ ಮೂತ್ರವನ್ನು ತಂದು ಕೊಡುವಂತೆ ತಿಳಿಸಿದ್ದು, ಶೌಚಾಲಯಕ್ಕೆ ಹೋಗಿದ್ದ ನಟಿ, ಮೂತ್ರದ ಬದಲು ನೀರನ್ನು ಚಿಕ್ಕ ಡಬ್ಬಿಯಲ್ಲಿ ತುಂಬಿ ಕೊಟ್ಟಿದ್ದರು. ಅದು ನೀರು ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿದ್ದಂತೆ ವೈದ್ಯರು ಪೊಲೀಸರ ಗಮನಕ್ಕೆ ತಂದಿರುವುದಾಗಿ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.
ರಾಗಿಣಿಗೆ ನೀರಿನ ಬಗ್ಗೆ ಪ್ರಶ್ನಿಸಿದಾಗ ತಪ್ಪೊಪ್ಪಿಕೊಂಡರು. ಅದಾದ ಬಳಿಕ ನರ್ಸ್ ಸಮ್ಮುಖದಲ್ಲೇ ರಾಗಿಣಿ ಅವರಿಂದ ಮೂತ್ರ ಸಂಗ್ರಹಿಸಲಾಯಿತು. ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೂ ತರಲಾಗುವುದು ಎಂದೂ ತಿಳಿಸಿದರು.
ಇನ್ನು ಸಂಜನಾ ಗಲ್ರಾನಿ ಹಾಗೂ ರಾಗಿಣಿ ಅವರ ರಕ್ತ, ಮೂತ್ರ ಹಾಗೂ ತಲೆಕೂದಲು ಪರೀಕ್ಷೆ ನಡೆಸಲು ನ್ಯಾಯಾಲಯದ ಅನುಮತಿ ಪಡೆದಿದ್ದ ಸಿಸಿಬಿ ಪೊಲೀಸರು, ನಟಿಯರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಪರೀಕ್ಷೆಗೆ ಸಂಜನಾ ಆಕ್ಷೇಪ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ರಾಗಿಣಿ ಸಹ ಪರೀಕ್ಷೆಗೆ ತಗಾದೆ ತೆಗೆದಿದ್ದರು. ಆಸ್ಪತ್ರೆ ಬೆಡ್ ಮೇಲೆಯೇ ಕುಳಿತು ತಮ್ಮ ಪರ ವಕೀಲರನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದಿದ್ದರು. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ಹರಿದಾಡುತ್ತಿದ್ದೆ.