ಮುಂಬಯಿ, ಸೆ.12(DaijiworldNews/HR): ನಟಿ ಕಂಗನಾ ಕಂಗನಾ ರಣಾವತ್ ಅವರ ಕಚೇರಿ ಕೆಡವಿದ ವಿಷಯದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾಫಿಯಾ ಡಾನ್ ದಾವೂದ್ ಇಬ್ರಾಹಿಂ ಅವರ ಮನೆಯನ್ನು ಸರಕಾರ ಏಕೆ ಉಳಿಸಿಕೊಂಡಿದೆ ಎಂಬುದಾಗಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಫಡ್ನವೀಸ್, ಮಹಾರಾಷ್ಟ್ರ ಸರಕಾರವು ಕಂಗನಾ ವಿರುದ್ಧ ಹೋರಾಡುವ ಬದಲು ಕೋವಿಡ್ ವಿರುದ್ಧ ಹೋರಾಡಿದ್ದರೆ ಇಷ್ಟರವರೆಗೆ ಸೋಂಕು ಹತೋಟಿಗೆ ಬರುತ್ತಿತ್ತು ಎಂದು ಟೀಕಿಸಿದ್ದಾರೆ. ನಟಿ ಕಂಗನಾ ಅವರ ಹೇಳಿಕೆ ದೊಡ್ಡ ವಿಷಯವಾಗಿರಲಿಲ್ಲ, ಆದರೆ ರಾಜ್ಯ ಸರಕಾರ ಅದನ್ನು ದೊಡ್ಡದಾಗಿಸಿದ್ದೀರಿ. ಅವರ ಕಚೇರಿಯನ್ನು ನೆಲಸಮಗೊಳಿಸಿದವರು ಯಾರು? ಅದು ನೀವಲ್ಲವೆ ಎಂದು ಉದ್ಧವ್ ಠಾಕ್ರೆಗೆ ನೇರವಾಗಿ ಪ್ರಶ್ನಿಸಿದ್ದಾರೆ.
ಭೂಗತ ಪಾತಕಿ ದಾವೂದ್ ಮನೆಯನ್ನು ನೆಲಸಮಗೊಳಿಸುವ ಆದೇಶದ ಬಳಿಕವೂ, ಇದಕ್ಕಾಗಿ ಸಾಕಷ್ಟು ಮಾನವಶಕ್ತಿ ಇಲ್ಲ ಎಂದು ನೀವು ಅಫಿಡವಿಟ್ ಸಲ್ಲಿಸಿದ್ದೀರಿ. ಕಂಗನಾ ಅವರ ಕಟ್ಟಡವನ್ನು ನೆಲಸಮಗೊಳಿಸಲು ನಿಮಗೆ ಎಲ್ಲಿಂದ ಕಾರ್ಮಿಕರು ಸಿಕ್ಕಿದ್ದಾರೆ. ಕಂಗನಾ ಮನೆಯನ್ನು ಧ್ವಂಸ ಮಾಡಿದಷ್ಟೆ ಆಸಕ್ತಿಯನ್ನು ನೀವು ದಾವೂದ್ ಮನೆಯ ವಿಷಯದಲ್ಲಿ ಯಾಕೆ ತೋರಿಸಿಲ್ಲ ಎಂದು ಹೇಳಿದ್ದಾರೆ.