ಬೆಂಗಳೂರು,ಸೆ.12(DaijiworldNews/HR): ಈ ಬಾರಿ ಸರಳವಾಗಿ ಮೈಸೂರು ದಸರಾ ಆಚರಿಸಲು ನಿರ್ಧರಿಸಲಾಗಿದ್ದು, ಹೆಚ್ಚು ಜನರು ಸೇರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಮೈಸೂರು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದಿಂದ ಆನೆಗಳ ಅಂತಿಮ ಪಟ್ಟಿ ರವಾನೆಗೊಳಿಸಿದ್ದು, ಮುಂದಿನ ತಿಂಗಳು ನಡೆಯುವ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಎಲ್ಲ ಆನೆಗಳಿಗೂ ಕೊರೋನಾ ಟೆಸ್ಟ್ ಮಾಡಲಾಗುವುದು.
ಸಾಂಧರ್ಭಿಕ ಚಿತ್ರ
ಈ ವರ್ಷ ನಡೆಯುವ ಸರಳ ದಸರಾ ಆಚರಣೆಯಲ್ಲಿ ಕೊರೊನಾ ವೈರಸ್ ನಿಂದ ಆನೆಗಳನ್ನು ರಕ್ಷಿಸಲು ಮುಂಜಗ್ರತಾ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದ್ದು, ಮೈಸೂರು ಅರಮನೆಯಲ್ಲಿರುವ ದಸರಾ ಆನೆಗಳನ್ನು ನೋಡಲು ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ, ಜೊತೆಗೆ ಆನೆಗಳಿರುವ ಸ್ಥಳಕ್ಕೆ ಪದೇ ಪದೇ ಹೋಗದಂತೆ ಮಾವುತರಿಗೂ ಸೂಚನೆ ನೀಡಲಾಗಿದೆ.
ದಸರಾ ಆಚರಣೆ ಮುಗಿದ ನಂತರ ಅವುಗಳಿಗೆ ಸೋಂಕು ತಗುಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಆನೆಗಳು ಶಿಬಿರಕ್ಕೆ ತೆರಳುವ ಮುನ್ನ ಕೊರೋನಾ ಪರೀಕ್ಷೆ ನಡೆಸಲಾಗುವುದು ಎಂದು ಅರಣ್ಯ ಉಪ ಸಂರಕ್ಷಕ ಅಲೆಕ್ಸಾಂಡರ್ ತಿಳಿಸಿದ್ದಾರೆ. ಇನ್ನೂ ಆನೆಗಳ ಜೊತೆ ಬಂದಿರುವ ಮಾವುತರು ಮತ್ತು ಕಾವಾಡಿಗರಿಗೂ ಆರೋಗ್ಯ ತಪಾಸಣೆ ಮಾಡಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.