ಬೆಂಗಳೂರು, ಸೆ. 13 (DaijiworldNews/MB) : ಮಂಡ್ಯದ ಅರಕೇಶ್ವರ ದೇವಾಲಯದ ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆಗೈದು ಹುಂಡಿಯಲ್ಲಿದ್ದ ನೋಟುಗಳನ್ನು ಕದೊಯ್ದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರವು ಇಂತಹ ಘಟನೆಗಳನ್ನು ತಪ್ಪಿಸಲು ತಿಂಗಳಿಗೊಮ್ಮೆ ದೇವಾಲಯದ ಹುಂಡಿಗಳನ್ನು ತೆರೆಯಲು ಕ್ರಮಕೈಗೊಳ್ಳಲಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಶನಿವಾರ ತಿಳಿಸಿದ್ದಾರೆ.
ಮಂಡ್ಯದಲ್ಲಿ ಮೃತ ಅರ್ಚಕರ ಕುಟುಂಬಸ್ಥರಿಗೆ 5 ಲಕ್ಷ ರೂ. ಚೆಕ್ ಹಸ್ತಾಂತರ ಮಾಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿರು. ಹಾಗೆಯೇ ದೇವಾಲಯದ ಆವರಣದ ಒಳಗೆ ಮತ್ತು ಹೊರಗೆ ಕಾರ್ಯನಿರ್ವಹಿಸದ ಸಿಸಿಟಿವಿ ಕ್ಯಾಮೆರಾಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂ ಅವರಿಗೆ ನಿರ್ದೇಶನ ನೀಡಿದರು.
ಪ್ರಸ್ತುತ ಮುಜರಾಯಿ ಇಲಾಖೆಯು ಮೂರು ತಿಂಗಳಿಗೊಮ್ಮೆ ಹುಂಡಿಗಳನ್ನು ತೆರೆಯಲಾಗುತ್ತದೆ. ಆದರೆ ಮಂಡ್ಯದ ಅರಕೇಶ್ವರ ದೇವಾಲಯದಲ್ಲಿ ಕಳೆದ 10 ತಿಂಗಳಿನಿಂದ ತೆರೆದಿಲ್ಲ. ಈ ಕಾರಣದಿಂದಾಗಿ ಈ ಹುಂಡಿಯಲ್ಲಿ ಭಾರೀ ಪ್ರಮಾಣದಲ್ಲಿ ನಗದು ಇತ್ತು ಎಂದು ವರದಿಯಾಗಿದೆ.
ಇನ್ನು ಪೊಲೀಸರ ಪ್ರಕಾರ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಗುತ್ತದೆ. ಇದು "ಎ" ವರ್ಗದ ದೇವಾಲಯಕ್ಕೆ ಕಡ್ಡಾಯವಾಗಿದ್ದು "ಬಿ" ವರ್ಗದ ದೇವಾಲಯಗಳಲ್ಲಿ ತಹಶೀಲ್ದಾರ್ ಉಪಸ್ಥಿತಿಯ ಅಗತ್ಯವಿರುತ್ತದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, "ಮಾರ್ಚ್ನಿಂದ, ಇಡೀ ರಾಜ್ಯದಲ್ಲಿ ಕೊರೊನಾ ಕಾರಣದಿಂದಾಗಿ ಹಲವು ಸಮಸ್ಯೆಗಳು ಉಂಟಾಗಿದೆ. ಜಿಲ್ಲಾಡಳಿತವು ಸಂಪೂರ್ಣವಾಗಿ ಕೊರೊನಾ ನಿಯಂತ್ರಣದತ್ತ ಗಮನ ಹರಿಸಿದ್ದು ಹುಂಡಿ ಹೊರ ತೆಗೆಯಲಿಲ್ಲ. ಇದನ್ನೇ ನೋಡಿ ಹೊಂಚು ಹಾಕುತ್ತಿದ್ದ ಖದೀಮರು ಅರ್ಚಕರನ್ನು ಹತ್ಯೆಗೈದು ಹುಂಡಿಯಲ್ಲಿದ್ದ ನಗದನ್ನು ದೋಚಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅರಕೇಶ್ವರ ದೇವಾಲಯದಲ್ಲಿ ಮೊದಲ ಪೂಜೆಯನ್ನು ಮಾಡಿದ ಕುಟುಂಬಕ್ಕೆ ಮಾತ್ರ ಈ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಅವಕಾಶವಿದೆ. ಒಂದು ಶತಮಾನದಿಂದ ಈ ಕುಟುಂಬವೇ ಈ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದೆ. ಕುಟುಂಬದ ಪ್ರತಿಯೊಬ್ಬ ಸದಸ್ಯರು ವರ್ಷಕ್ಕೆ ಎರಡು ಅಥವಾ ಮೂರು ದಿನಗಳು ಮಾತ್ರ ಈ ದೇವಾಲಯದಲ್ಲಿ ಪೂಜೆ ಮಾಡುವ ಅವಕಾಶವನ್ನು ಪಡೆಯುತ್ತಾರೆ. ಈ ಮೂವರು ಮೃತ ಅರ್ಚಕರು ಕೂಡಾ ಮೂರು ದಿನಗಳ ಕಾಲ ಪೂಜೆ ಸಲ್ಲಿಸುವ ಅವಕಾಶ ಪಡೆದಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಪೊಲೀಸ್ ವರಿಷ್ಠಾಧಿಕಾರಿ ಕೆ. ಪರುಶರಾಮ್ ಅವರೊಂದಿಗೆ ಮಾತನಾಡಿ, "ಈ ಹತ್ಯೆ ಬಗ್ಗೆ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಇದು ಹತ್ಯೆ ಎಂದು ತಿಳಿದು ಬಂದಿದೆ. ನಮಗೆ ದೊರೆತ ಸುಳಿವುಗಳ ಆಧಾರದಲ್ಲಿ ಅಲೆಮಾರಿ ಗುಂಪೊಂದನ್ನು ನಾವು ಪತ್ತೆ ಮಾಡುತ್ತಿದ್ದೇವೆ. ಚಲನ ವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಅಪರಾಧಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.
ಮುಜರಾಯಿ ಇಲಾಖೆಗೆ ಸೇರಿರುವ ಮಂಡ್ಯದ ಅರಕೇಶ್ವರ ದೇವಾಲಯದ ಮೂವರು ಅರ್ಚಕರಾದ ಗಣೇಶ್ (35), ಪ್ರಕಾಶ್ (36), ಆನಂದ್ (33) ಎಂಬವರು ದೇವಾಲಯದ ಪೂಜೆಯೊಂದಿಗೆ ದೇವಾಲಯದ ಕಾವಲು ಕೂಡಾ ಕಾಯುತ್ತಿದ್ದರು. ಗುರುವಾರ ರಾತ್ರಿ ಅರ್ಚಕರನ್ನು ಹತ್ಯೆ ಮಾಡಿ ಹುಂಡಿಯ ಹಣವನ್ನು ದೋಚಿರುವ ಕಳ್ಳರು, ಹುಂಡಿಯಲ್ಲಿನ ನೋಟುಗಳನ್ನು ಮಾತ್ರ ತೆಗೆದುಕೊಂಡು ಚಿಲ್ಲರೆ ಇರುವ ಹುಂಡಿಯನ್ನು ಆವರಣದಲ್ಲಿ ಎಸೆದು ಹೋಗಿದ್ದಾರೆ.