ಮುಂಬೈ, ಸೆ. 13 (DaijiworldNews/MB) : ಮಹಾರಾಷ್ಟ್ರದಲ್ಲಿ ಶಿವಸೇನಾ ನಾಯಕರು ಮತ್ತು ನಟಿ ಕಂಗನಾ ರಣಾವತ್ ನಡುವಿನ ವಾಕ್ಸಮರ ಮುಂದುವರೆದಿದ್ದು ಏತನ್ಮಧ್ಯೆ ಕಂಗನಾ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿಯಾಗಲಿದ್ದಾರೆ.
ಹಿಮಾಚಲ ಪ್ರದೇಶದ ತಮ್ಮ ಊರಿಗೆ ತೆರಳುವ ಮುನ್ನ ಸಂಜೆ 4.30 ಗಂಟೆಗೆ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದು ಸಭೆ ನಿಗದಿ ಮಾಡಲಾಗಿದೆ. ಆದರೆ ಭೇಟಿಯ ಉದ್ದೇಶವೇನು ಎಂದು ಈವರೆಗೂ ತಿಳಿದು ಬಂದಿಲ್ಲ.
ನಟ ಸುಶಾಂತ್ ಸಿಂಗ್ ನಿಧನದ ಬಳಿಕ ಅದು ಆತ್ಮಹತ್ಯೆಯಲ್ಲಿ ಹತ್ಯೆ ಎಂದು ನಿರಂತರವಾಗಿ ವಾದಿಸುತ್ತಲ್ಲೇ ಬರುತ್ತಿರುವ ನಟಿ ಕಂಗನಾ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದಾರೆ. ಶಿವಸೇನೆ ಹಾಗೂ ಕಂಗನಾ ನಡುವೆ ವಾಕ್ಸಮರ ನಡೆಯುತ್ತಲ್ಲೇ ಇದೆ. ಏತನ್ಮಧ್ಯೆ ಮುಂಬೈನ ಪಾಲಿ ಹಿಲ್ ಪ್ರದೇಶದಲ್ಲಿನ ಕಂಗನಾರ ಕಚೇರಿ ಅಕ್ರಮ ಎಂದು ಅದನ್ನು ಬಿಎಂಸಿ ನೆಲಸಮಗೊಳಿಸಲು ಮುಂದಾಗಿದ್ದು ಕಂಗನಾ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಅಕ್ರಮ ಕಟ್ಟಡ ಧ್ವಂಸ ಕಾರ್ಯಕ್ಕೆ ತಡೆಯಾಜ್ಞೆ ನೀಡಿತ್ತು. ಬಳಿಕ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ದ ವಾಗ್ದಾಳಿ ನಡೆಸಿದ್ದ ಕಂಗನಾ ಅವರು, ಏಕವಚನದಲ್ಲೇ ವಾಕ್ ಪ್ರಹಾರ ನಡೆಸಿದ್ದರು.
ಇನ್ನು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಲ್ಲಿ ಕಂಗನಾ ತನಗೆ ಮುಂಬೈ ಪೊಲೀಸರ ಸುರಕ್ಷತೆಯಲ್ಲಿರಲು ಭಯವಾಗುತ್ತದೆ ಎಂದು ಹೇಳಿದ್ದು ಕೇಂದ್ರ ಗೃಹ ಸಚಿವಾಲಯವು ವೈ+ ಶ್ರೇಣಿಯ ಭದ್ರತೆಯನ್ನು ಒದಗಿಸಿದೆ.