ನವದೆಹಲಿ, ಸೆ. 13 (DaijiworldNews/MB) : ಕೊರೊನಾ ಹಿನ್ನೆಲೆಯಲ್ಲಿ ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸರ್ವಪಕ್ಷ ಸಭೆ ನಡೆಸುವುದಿಲ್ಲ ಎಂದು ಭಾನುವಾರ ವರದಿಯಾಗಿದೆ.
ಸಂಸತ್ ಅಧಿವೇಶನಕ್ಕೂ ಮುನ್ನ ಸರ್ವಪಕ್ಷ ನಾಯಕರ ಜೊತೆ ಸಭೆ ನಡೆಸಿ ಚರ್ಚಿಲಿರುವ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಆದರೆ ಈ ಬಾರಿ ಕೊರೊನಾ ಕಾರಣದಿಂದಾಗಿ ಅಧಿವೇಶನಕ್ಕೂ ಮುನ್ನ ಈ ಸಭೆ ನಡೆಯುವುದಿಲ್ಲ.
ಇನ್ನು ಸೋಮವಾರದಿಂದ ನಡೆಯಲಿರುವ ಈ ಮುಂಗಾರು ಅಧಿವೇಶನದಲ್ಲಿ ವಿರೋಧ ಪಕ್ಷಗಳು ದೇಶದಲ್ಲಿ ಉಂಟಾದ ಕೊರೊನಾ ಬಿಕ್ಕಟ್ಟು, ಆರ್ಥಿಕ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಜಿಡಿಪಿ ಕುಸಿತ, ಚೀನಾ ಗಡಿ ಬಿಕ್ಕಟ್ಟು, ಬೆಲೆ ಏರಿಕೆ ಮೊದಲಾದವುಗಳನ್ನು ಮುಂದಿಟ್ಟು ಸರ್ಕಾರವನ್ನು ಪೇಚಿಗೆ ಸಿಲುಕಿಸಲು ತಯಾರಾಗಿದೆ. ಭಾರತ ಚೀನಾ ಗಡಿ ವಿವಾದ ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಗೆ ಸಂಬಂಧಿಸಿದ ವಿಷಯವಾದ ಕಾರಣ ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಯುವ ಸಾಧ್ಯತೆ ಕಡಿಮೆ ಎಂದು ವರದಿ ತಿಳಿಸಿದೆ.
23 ಮಹತ್ವದ ಮಸೂದೆಗಳಿಗೆ ಸಂಸತ್ ಮುಂಗಾರು ಅಧಿವೇಶನದಲ್ಲಿ ಅಂಗೀಕಾರ ಪಡೆಯಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದ್ದು, ಕೃಷಿಕರು ತಮ್ಮ ಉತ್ಪನ್ನಗಳನ್ನು ಎಪಿಎಂಸಿಯ ಹೊರಗೆ ಯಾರಿಗೆ ಬೇಕಾದರೂ ಮಾರಾಟ ಮಾಡಲು ಅನುಮತಿ ನೀಡುವ ಸುಗ್ರೀವಾಜ್ಞೆ ಹಾಗೂ ಕೃಷಿ ವ್ಯಾಪಾರ ಸಂಸ್ಥೆಗಳ ಜತೆಗೆ ಕೃಷಿಗೆ ಸಂಬಂಧಿಸಿದ ಒಪ್ಪಂದ ಮಾಡಿಕೊಳ್ಳಲು ರೈತರಿಗೆ ಅನುವುಮಾಡಿಕೊಡುವ ಸುಗ್ರೀವಾಜ್ಞೆಗಳ ಬಗ್ಗೆ ಅಧಿವೇಶನದಲ್ಲಿ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ಬಿರುಸಿನ ಚರ್ಚೆ ನಡೆಯುವ ನಿರೀಕ್ಷೆ ಇದೆ.