ಬೆಂಗಳೂರು, ಸೆ.13(DaijiworldNews/HR): ಡ್ರಗ್ಸ್ ದಂಧೆ ಜಾಲದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಬೆಂಗಳೂರಿನ ಚಿನ್ನದ ವ್ಯಾಪಾರಿ ವೈಭವ್ ಜೈನ್ ಎಂಬಾತನನ್ನು ಬಂಧಿಸಿದ್ದಾರೆ.
ಸಿಸಿಬಿ ಪೊಲೀಸರು ಶನಿವಾರ ವೈಭವ್ ಜೈನ್ ಬಂಧಿಸಿದ್ದಾರೆ. ಪ್ರಕರಣದ ತನಿಖೆ ಆರಂಭದಲ್ಲಿಯೇ ವೈಭವ್ ಜೈನ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಆದರೆ, ಆರೋಪಿಗೆ ಕೊರೊನಾ ಸೋಂಕು ತಗುಲಿತ್ತು. ಗುಣಮುಖರಾಗುತ್ತಿದ್ದಂತೆ ವಶಕ್ಕೆ ಪಡೆಯಲಾಗಿದೆ.
ಇನ್ನು ಚಿನ್ನದ ವ್ಯಾಪಾರಿಯಾದ ವೈಭವ್ ಜೈನ್ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ. ಜೈನ್ ಫೋನ್ ಕರೆಗಳ ಮಾಹಿತಿ ಸಂಗ್ರಹ ಮಾಡಿದ್ದ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಜೈನ್ಗೆ ಆಫ್ರಿಕಾ ಪ್ರಜೆಗಳ ಪರಿಚಯವಾಗಿತ್ತು. 2018ರಲ್ಲಿ ಈಗಾಗಲೇ ಸಿಸಿಬಿ ವಶದಲ್ಲಿರುವ ವಿರೇನ್ ಖನ್ನಾ ಪರಿಚಯವಾಗಿತ್ತು. ಬಳಿಕ ಈ ಜಾಲದಲ್ಲಿ ಸಕ್ರಿಯರಾಗಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ತನಿಖೆ ನಡೆಯುತ್ತಿದೆ.