ನವದೆಹಲಿ, ಸೆ. 13 (DaijiworldNews/MB) : ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ಸಂಪೂರ್ಣ ವೈದ್ಯಕೀಯ ತಪಾಸಣೆಗಾಗಿ ಗೃಹ ಸಚಿವ ಅಮಿತ್ ಶಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ದೆಹಲಿಯ ಏಮ್ಸ್ ಆಸ್ಪತ್ರೆ ಸ್ಪಷ್ಟನೆ ನೀಡಿದೆ.
ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಆಗಸ್ಟ್ 30 ರಂದು ಏಮ್ಸ್ನಿಂದ ಬಿಡುಗಡೆಯಾಗಿದ್ದ ಕೇಂದ್ರ ಗೃಹ ಅಮಿತ್ ಶಾ ಅವರು ಶನಿವಾರ ರಾತ್ರಿ 11 ಗಂಟೆಗೆ ಮತ್ತೆ ಏಮ್ಸ್ಗೆ ದಾಖಲಾಗಿದ್ದಾರೆ. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಅಮಿತ್ ಶಾ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಈ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಆಸ್ಪತ್ರೆ ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ.
ಇದೀಗ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಏಮ್ಸ್ ಆಸ್ಪತ್ರೆಯ ಅಧ್ಯಕ್ಷರು, ಆಗಸ್ಟ್ 30 ರಂದು ಅಮಿತ್ ಶಾ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಬಿಡುಗಡೆಯ ಸಂದರ್ಭ ನೀಡಿದ ಸಲಹೆಯಂತೆ, ಅವರನ್ನು ಈಗ 1-2 ದಿನಗಳ ಕಾಲ ಸಂಸತ್ತಿನ ಅಧಿವೇಶನಕ್ಕೆ ಮುಂಚಿತವಾಗಿ ಸಂಪೂರ್ಣ ವೈದ್ಯಕೀಯ ತಪಾಸಣೆ ನಡೆಸಲು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.