ಬೆಂಗಳೂರು, ಸೆ.13(DaijiworldNews/HR): ಮಾದಕ ವಸ್ತುಗಳು ಗಡಿ ರಾಜ್ಯದಿಂದ ಬರುವ ನಿಯಂತ್ರಣಕ್ಕೆ ಇನ್ನಷ್ಟು ಬಿಗಿ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು,ಈ ಬಗ್ಗೆ ಗಡಿ ಜಿಲ್ಲೆಗಳ ಪೊಲೀಸರಿಗೆ ನಿರ್ದೇಶನ ನೀಡಲಾಗುವುದು. ಡ್ರಗ್ಸ್ ದಂಧೆ ತನಿಖೆಗೆ ಗುಪ್ತಚರ ಇಲಾಖೆಯ ಪೊಲೀಸರನ್ನೂ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂಬುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡ್ರಗ್ಸ್ ಜಾಲದ ವಿರುದ್ಧ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ತನಿಖೆ ದೃಷ್ಟಿಯಲ್ಲಿ ಮುಂದಿನ ವಾರ ಅತ್ಯಂತ ಮಹತ್ವದಾಗಿದೆ. ಕೇಂದ್ರ ಸಿಸಿಬಿಯನ್ನು ಇನ್ನಷ್ಟು ಬಲಗೊಳಿಸುತ್ತೇವೆ. ಸಿಸಿಬಿಗೆ ಹೆಚ್ಚಿನ ಸಿಬ್ಬಂದಿ, ಸೌಲಭ್ಯ ಕೊಡುವ ಬಗ್ಗೆಯೂ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಎನ್ಡಿಪಿಎಸ್ (ನಾರ್ಕೊಟಿಕ್ ಡ್ರಗ್ಸ್ ಆಂಡ್ ಸೈಕೊಟ್ರಾಫಿಕ್ ಸಬ್ಸ್ಟೆನ್ಸಸ್) ಕಾಯ್ದೆ ಜಾರಿಯಲ್ಲಿ ಕೆಲ ಸಮಸ್ಯೆಗಳಿವೆ. ಅವುಗಳ ನಿವಾರಣೆಗೆ ತಜ್ಞರ ಜತೆ ಶೀಘ್ರದಲ್ಲೇ ಸಮಾಲೋಚನೆ ನಡೆಸುತ್ತೇನೆ. ಡ್ರಗ್ಸ್ ಜಾಲದ ಬಗ್ಗೆ ಪ್ರತಿಯೊಬ್ಬರ ಜೊತೆಗೆ ಸಮಾಜ ಕೂಡ ಜಾಗೃತ ಆಗಬೇಕು. ಹೀಗಾಗಿ, ಈ ಕುರಿತು ಯಾವುದೇ ಹೇಳಿಕೆ, ಮಾಹಿತಿ ಬಂದರೂ ಗಂಭೀರವಾಗಿ ಪರಿಗಣಿಸಲು ಸೂಚಿಸಿದ್ದೇನೆ. ಮಾಹಿತಿ ಯಾವುದೇ ರೂಪದಲ್ಲಿ ಬಂದರೂ ತನಿಖೆಗೆ ಒಳಪಡಿಸಲು ಸೂಚಿಸಿದ್ದೇನೆ ಎಂಬುದಾಗಿ ಬೊಮ್ಮಾಯಿ ಹೇಳಿದ್ದಾರೆ.