ಮುಂಬೈ, ಸೆ.13(DaijiworldNews/HR): ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದವರಿಗೆ ಮಹಾರಾಷ್ಟ್ರದ ಪ್ರಧಾನ ವಿರೋಧ ಪಕ್ಷ ಬೆಂಬಲ ನೀಡುತ್ತಿರುವುದು ದುರದೃಷ್ಟಕರ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಶಿನಸೇನಾ ಮುಖವಾಣಿ ಸಾಮ್ನಾದಲ್ಲಿ ತಮ್ಮ ಅಂಕಣ ರೋಖಾಟೋಕ್ ನಲ್ಲಿ ಬರೆದುಕೊಂಡಿರುವ ಸಂಜಯ್, ಬಾಲಿವುಡ್ ನಟಿ ಕಂಗನಾ ರಣಾವತ್ ಹೆಸರು ಎಲ್ಲಿಯೂ ಕೂಡ ಪ್ರಸ್ಥಾಪಿಸಲಿಲ್ಲ. ಮಾತ್ರವಲ್ಲದೆ ಬಿಜೆಪಿಯು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ಹಾಗೂ ಬಿಎಂಸಿ (ಬೃಹನ್ ಮಂಬೈ ಮಹಾನಗರ ಪಾಲಿಕೆ)ಯನ್ನು ಬಾಬರ್ ಆರ್ಮಿ ಎಂದು ಕರೆದವರಿಗೆ ಮಹಾರಾಷ್ಟ್ರದ ಪ್ರತಿಪಕ್ಷ ಬೆಂಬಲ ನೀಡುತ್ತಿದೆ. ಇದು ಬಿಹಾರ ಚುನಾವಣೆಯಲ್ಲಿ ರಜಪೂತ್ ಹಾಗೂ ಕ್ಷತ್ರಿಯಾ ಪಂಗಡದ ಮತ ಪಡೆಯಲು ಅನುಸರಿಸುತ್ತಿರುವ ತಂತ್ರವಾಗಿದೆ. ಮಹಾರಾಷ್ಟ್ರವನ್ನು ಅವಮಾನಿಸಿದರೂ ಬಿಜೆಪಿ ಕ್ಯಾರೇ ಅನ್ನುತ್ತಿಲ್ಲ. ಈ ನೀತಿಯು ತಮ್ಮನ್ನು ‘ರಾಷ್ಟ್ರೀಯ’ ಎಂದು ಕರೆದುಕೊಳ್ಳುವವರಿಗೆ ವಿರುದ್ಧವಾದುದು ಎಂಬುದಾಗಿ ಸಂಜಯ್ ರೌತ್ ಹೇಳಿದ್ದಾರೆ.
ಇನ್ನು ಮುಂಬೈನ ಪ್ರಾಮುಖ್ಯತೆಯನ್ನು ಕಡಿಮೆ ಮಾಡಲು ನಡೆಸುತ್ತಿರುವ ವ್ಯವಸ್ಥಿತ ಪ್ರಯತ್ನ ಇದಾಗಿದ್ದು, ಮಹಾರಾಷ್ಟ್ರದ ಎಲ್ಲಾ ಮರಾಠಿ ಜನರು ಒಗ್ಗೂಡಬೇಕಾದ ಕಠಿಣ ಅವಧಿ ಇದಾಗಿದೆ. ನಟಿಯೊಬ್ಬರು ರಾಜ್ಯದ ಮುಖ್ಯಮಂತ್ರಿಯನ್ನು ಅವಮಾನಿಸಿದರೇ ಯಾವೊಬ್ಬ ವ್ಯಕ್ತಿಯೂ ಕೂಡ ಇದರ ವಿರುದ್ಧ ಧ್ವನಿ ಎತ್ತಿಲ್ಲ. ಯಾವ ರೀತಿಯ ಸ್ವಾತಂತ್ರ್ಯವಿದು ? ಎಂಬುದಾಗಿ ಸಂಜಯ್ ಪ್ರಶ್ನಿಸಿದ್ದಾರೆ.