ಮುಂಬೈ, ಸೆ. 13 (DaijiworldNews/MB) : ಯಾವುದೇ ರಾಜಕೀಯ ಬಿರುಗಾಳಿ ಬಂದರೂ ಕೊರೊನಾದೊಂದಿಗೆ ಅದನ್ನೂ ಎದುರಿಸುತ್ತೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹೇಳಿದ್ದಾರೆ.
ಭಾನುವಾರ ರಾಜ್ಯದ ದೂರದರ್ಶನದಲ್ಲಿ ಪ್ರಸಾರವಾದ ಸಾರ್ವಜನಿಕ ಭಾಷಣದಲ್ಲಿ ಮಾತನಾಡಿದ ಅವರು, ನಾವು ಕಳೆದ ಹಲವು ತಿಂಗಳುಗಳಿಂದ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದೇವೆ. ಇನ್ನು ಅದರೊಂದಿಗೆ ಈ ರಾಜಕೀಯ ಬಿಕ್ಕಟ್ಟಿನ ವಿರುದ್ದವೂ ಹೋರಾಟ ನಡೆಸುತ್ತೇವೆ.
"ಈಗ ಕೊರೊನಾದ ಕಾಲ ಮುಗಿದಿದೆ. ಹಾಗಾಗಿ ಮತ್ತೆ ತಮ್ಮ ರಾಜಕೀಯವನ್ನು ಪ್ರಾರಂಭಿಸಬೇಕು ಎಂದು ಕೆಲವರು ಭಾವಿಸಬಹುದು. ನಾನು ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ ಆದರೆ ಈ ರಾಜಕೀಯದಲ್ಲಿ ಮಹಾರಾಷ್ಟ್ರಕ್ಕೆ ಅಪಖ್ಯಾತಿ ತರುವ ಪಿತೂರಿ ಹುದುಗಿದೆ. ನನ್ನ ಮೌನವು ನನ್ನ ಬಳಿ ಯಾವುದೇ ಉತ್ತರವಿಲ್ಲ ಎಂದು ಅರ್ಥವಲ್ಲ ಎಂದು ಪರೋಕ್ಷವಾಗಿ ಬಿಜೆಪಿಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಹಾಗೆಯೇ ಈ ಸಂಕಷ್ಟದ ಸಂದರ್ಭದಲ್ಲಿ ಸಹಕಾರ ನೀಡಿದ ಮಹಾರಾಷ್ಟ್ರದ ಎಲ್ಲಾ ಧರ್ಮದ ಜನರ ಬೆಂಬಲಕ್ಕಾಗಿ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದ ಅವರು, ನಾವು ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು 'ನನ್ನ ಕುಟುಂಬ-ನನ್ನ ಜವಾಬ್ದಾರಿ' ಅಭಿಯಾನವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಕೂಡಾ ತಿಳಿಸಿದ್ದಾರೆ.