ಬೆಳಗಾವಿ, ಸೆ.13(DaijiworldNews/HR): ಡ್ರಗ್ಸ್ ವಿಚಾರದಲ್ಲಿ ಬಿಜೆಪಿ ಸರಕಾರ ಅಲ್ಪಸಂಖ್ಯಾತರು, ನಟಿಯರತ್ತ ಬೆರಳು ತೊರಿಸುತ್ತಿದೆ. ಉಳಿದ ಯಾವ ಗಂಡಸರು ಡ್ರಗ್ಸ್ ತೆಗೆದುಕೊಳ್ಳುತ್ತಿಲ್ಲವೇ? ಬಿಜೆಪಿಯ ದೊಡ್ಡ ಮುಖಂಡರೇ ಅಫೀಮು ತೆಗೆದುಕೊಳ್ಳುತ್ತಿದ್ದರು ಎಂಬುದಾಗಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದ ತತ್ವ, ಸಿದ್ಧಾಂತದ ಬಗ್ಗೆ ಅರಿವು ಮೂಡಿಸಲು ಶಿಬಿರವನ್ನು ಏರ್ಪಡಿಸಲಾಗಿದೆ. ಆದರೆ, ಆರೆಸೆಸ್ಸ್ ಮಾದರಿಯಲ್ಲ ಯಾಕೆಂದರೆ ಆರೆಸ್ಸೆಸ್ ನಿಂದ ಕಲಿಯಬೇಕಾದುದು ಏನೂ ಇಲ್ಲ. ಆರೆಸೆಸ್ಸ್ ಶಿಬಿರಕ್ಕೂ ಕಾಂಗ್ರೆಸ್ ಪಕ್ಷದ ಸೇವಾದಳ ಶಿಬಿರಕ್ಕೂ ಯಾವುದೇ ಸಂಬಂಧವಿಲ್ಲ. ಆರೆಸ್ಸೆಸ್ ನಂತೆ ನಮ್ಮ ಶತ್ರುಗಳನ್ನು ತಯಾರು ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ತನ್ನದೆ ಆದ ಸಿದ್ಧಾಂತವಿದ್ದು, ಅದರಡಿಯಲ್ಲಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗುವುದು ಎಂದರು.
ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದ ವಿರುದ್ಧವಿದ್ದು ಬ್ರಿಟಿಷರೊಂದಿಗೆ ಶಾಮೀಲಾಗಿದ್ದರು, ಆದರೆ ಇಂದು ದೇಶಪ್ರೇಮ, ದೇಶ ಭಕ್ತಿಯ ಹೆಸರಿನಲ್ಲಿ ಕೆಲ ಸಮುದಾಯಗಳನ್ನು ಗುರಿಯಾಗಿಟ್ಟುಕೊಂಡು ತೊಂದರೆ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ನಮ್ಮದು ಬಹು ಸಂಸ್ಕೃತಿಯ ದೇಶ. ಇಲ್ಲಿ ಎಲ್ಲರನ್ನು ಗೌರವದಿಂದ ಕಾಣಬೇಕು. ಪ್ಯಾಸಿಸ್ಟ್ ಗಳ ವಿರುದ್ಧ ಹೋರಾಟ ನಡೆಸಲು ಪಕ್ಷದ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇನ್ನು ಕಾಂಗ್ರೆಸ್ ಪಕ್ಷ ಲಾಠಿ ಹಿಡಿದುಕೊಂಡರೆ ಅದು ಬೇರೆಯವರಿಗೆ ಸಹಾಯ ಆಗುತ್ತದೆ ಹೊರತು, ತೊಂದರೆಯಾಗುವುದಿಲ್ಲ. ಈಗಾಗಲೇ ಆರೆಸ್ಸೆಸ್ ಲಾಠಿ ಹಿಡಿದು ಏನೇನು ಕೆಲಸ ಮಾಡಿದೆ ಎಂದು ದೇಶಕ್ಕೆ ಗೊತ್ತಿದೆ. ನಮ್ಮಿಂದ ಅವರು ಕಲಿಯಬೇಕೆ ಹೊರತು ಅವರಿಂದ ನಾವು ಕಲಿಯಬೇಕಿಲ್ಲ ಎಂದರು.