ಬೆಂಗಳೂರು, ಸೆ. 13 (DaijiworldNews/SM): ಕೇಂದ್ರ ಸರಕಾರ ರೈತರ ಪರ ಮಾತನಾಡಿ ಮತ್ತೊಂದೆಡೆ ಸದ್ದಿಲ್ಲದೆ ರೈತ ವಿರೋಧಿ ನಿತಿಗಳನ್ನು ಜಾರಿಗೆ ತರುತ್ತಿದ್ದು ಇದರ ವಿರುದ್ಧ ಹೋರಾಟ ಅನಿವಾರ್ಯ ಎಂದು ಮಾಜಿ ಸಿಎಂ ಹಾಗೂ ರಾಜ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ರೈತರನ್ನು ಶೋಷಿಸುವ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ, ಎಪಿಎಂಸಿ ತಿದ್ದುಪಡಿ ಕಾಯ್ದೆ ತರುವುದು ನ್ಯಾಯ ಸಮ್ಮತವಲ್ಲ. ಸರಕಾರ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬಹುದಿತ್ತು. ಆದರೆ, ಮತ್ತೊಂದು ಕಾಯ್ದೆ ತಂದು ಹೆಚ್ಚಿನ ತೊಂದರೆ ನೀಡುತ್ತಿದೆ. ಹೊಸ ಕಾಯ್ದೆಯಿಂದ ರೈತರಿಗೆ ಅನುಕೂಲವಾಗುವುದಿಲ್ಲ. ಬದಲಾಗಿ ಅನ್ಯಾಯವೇ ಹೆಚ್ಚು ಎಂದರು.
ರಾಜ್ಯ ಸರ್ಕಾರದ ಜನ ವಿರೋಧಿ, ರೈತ ವಿರೋಧಿ ಕಾಯ್ದೆಗಳ ವಿರುದ್ಧ ಸದನದಲ್ಲಿ ಸುದೀರ್ಘ ಚರ್ಚೆಗೆ ಅವಕಾಶ ನೀಡಬೇಕು. ಹಾಗೂ ಅವುಗಳ ಸಾಧಕ ಬಾಧಕಗಳ ಬಗ್ಗೆ ತಿಳಿದುಕೊಳ್ಳಬೇಕಿದೆ. ಆದರೆ, ಈ ಬಾರಿಯ ಅಧಿವೇಶನದಲ್ಲಿ ಇದಕ್ಕೆ ಅವಕಾಶ ಸಿಗುವುದು ಎನುಮಾನ ಎಂದು ಅವರು ಹೇಳಿದ್ದಾರೆ.