ನವದೆಹಲಿ, ಸೆ. 14 (DaijiworldNews/MB) : ಇಂದಿನಿಂದ ಸಂಸತ್ತಿನಲ್ಲಿ ಉಭಯ ಸದನಗಳ ಮುಂಗಾರು ಅಧಿವೇಶನ ಆರಂಭವಾಗಲಿದ್ದು ಇದೇ ಮೊದಲ ಬಾರಿಗೆ ಎರಡೂ ಸದನಗಳನ್ನೂ ಬಳಸಿಕೊಂಡು ಒಂದು ಸದನ ಕಲಾಪ ನಡೆಸಲಾಗುತ್ತಿದೆ.
ಒಂದು ಕಲಾಪದಿಂದ ಮತ್ತೊಂದು ಕಲಾಪಕ್ಕೆ ಆರು ತಿಂಗಳ ಕಾಲದ ಅಂತರವಿರಬಾರದು ಎಂಬ ನಿಯಮದ ಪ್ರಕಾರವಾಗಿ ಕೊರೊನಾ ನಡುವೆಯೂ ಈ ಕಲಾಪವನ್ನು ನಡೆಸಲಾಗುತ್ತಿದ್ದು ಈ ಅಧಿವೇಶನವೂ ಎಂದಿಗಿಂತ ವಿಭಿನ್ನವಾಗಿ ನಡೆಯಲಿದೆ. ಸಾಮಾಜಿಕ ಅಂತರಕ್ಕೆ ಹೆಚ್ಚಿನ ಆಧ್ಯತೆ ನೀಡುವ ನಿಟ್ಟಿನಲ್ಲಿ ಎರಡು ಪಾಳಿಗಳಲ್ಲಿ ಕಲಾಪ ನಡೆಸಲಾಗುತ್ತಿದೆ.
ಸೋಮವಾರದಿಂದ ಅ. 1ರ ವರೆಗೆ ಕಲಾಪ ನಡೆಯಲಿದ್ದು ಈ ಬಾರಿ ಯಾವುದೇ ವಾರಾಂತ್ಯಗಳೂ, ಸರ್ಕಾರಿ ರಜೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸತತ 18 ದಿನ ಕಲಾಪ ನಡೆಸಲು ಉದ್ದೇಶಿಸಲಾಗಿದೆ. ಬೆಳಿಗ್ಗೆ ರಾಜ್ಯಸಭೆ ಹಾಗೂ ಸಂಜೆ ಲೋಕಸಭೆ ಕಲಾಪಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸಾಮಾಜಿಕ ಅಂತರವನ್ನು ಗಮನದಲ್ಲಿಟ್ಟುಕೊಂಡು ಆಸನದ ವ್ಯವಸ್ಥೆ ಮಾಡಲಾಗಿದ್ದು ಸದಸ್ಯರ ನಡುವೆ ಪಾಲಿಕಾರ್ಬನ್ ಶೀಟ್ಗಳನ್ನು ಅಳವಡಿಸಲಾಗಿದೆ. ಲೋಕಸಭೆಯಲ್ಲಿ 257, ವೀಕ್ಷಕರ ಗ್ಯಾಲರಿಯಲ್ಲಿ 172, ರಾಜ್ಯಸಭೆಯಲ್ಲಿ 60, ವೀಕ್ಷಕರ ಗ್ಯಾಲರಿಯಲ್ಲಿ 51 ಸಂಸದರಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು ಶೂನ್ಯವೇಳೆಯಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಮಂಡನೆಗೆ ಅವಕಾಶ ನೀಡಲಾಗಿದೆ. ಕೆಲವು ಹಿರಿಯ ಸದಸ್ಯರಿಗೆ ಚೇಂಬರ್ ವ್ಯವಸ್ಥೆ ಮಾಡಿ ಆಸನ ಸೌಕರ್ಯ ಕಲ್ಪಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕಲಾಪಕ್ಕೆ ಹಾಜರಾಗುವ ಸಂಸದರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿಲಾಗಿದೆ.
ಮೊದಲ ದಿನ ಮಾತ್ರ ಬೆಳಿಗ್ಗೆ 9ರಿಂದ 1ರವರೆಗೆ ಲೋಕಸಭೆ, ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ರಾಜ್ಯಸಭೆ ಕಲಾಪ ನಡೆಯಲಿದೆ. ಮರುದಿನದಿಂದ ಬೆಳಿಗ್ಗೆ ರಾಜ್ಯಸಭೆ ಹಾಗೂ ಸಂಜೆ ಲೋಕಸಭೆ ಕಲಾಪ ನಿಗದಿಯಾಗಿದೆ.
ಇನ್ನು ಸದನದಲ್ಲಿ ಬಿಜೆಪಿ ಸರ್ಕಾರವು 45 ಮಸೂದೆಗಳನ್ನು ಮಂಡಿಸಲು ಉದ್ದೇಶಿಸಿದ್ದು, ಈ ಪೈಕಿ ಕೆಲವನ್ನು ಖಡಾಖಂಡಿತವಾಗಿ ವಿರೋಧಿಸಲು ವಿರೋಧ ಪಕ್ಷಗಳು ಸಜ್ಜಾಗಿದೆ. ಹಾಗೆಯೇ ದೇಶದಲ್ಲಿ ಉಂಟಾದ ಕೊರೊನಾ ಬಿಕ್ಕಟ್ಟು, ಆರ್ಥಿಕ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಜಿಡಿಪಿ ಕುಸಿತ, ಚೀನಾ ಗಡಿ ಬಿಕ್ಕಟ್ಟು, ಬೆಲೆ ಏರಿಕೆ, ಜಿಎಸ್ಟಿ ನಷ್ಟ ಪರಿಹಾರ ವಿಚಾರ ಮೊದಲಾದವುಗಳನ್ನು ಮುಂದಿಟ್ಟು ಸರ್ಕಾರವನ್ನು ಪೇಚಿಗೆ ಸಿಲುಕಿಸಲು ಕೂಡಾ ವಿರೋಧ ಪಕ್ಷಗಳು ತಯಾರಾಗಿದೆ.