ಬೆಂಗಳೂರು, ಸೆ. 14 (DaijiworldNews/MB) : ''ಭಾಷಾ ಅಹಂಕಾರದ ಸಂಕೇತ ಹಿಂದಿ ದಿವಸ, ಸ್ವಾಭಿಮಾನಿ ಕನ್ನಡಿಗರ ಪ್ರಬಲ ವಿರೋಧವಿದೆ'' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಹಿಂದಿ ದಿವಸವಾದ ಇಂದು ಈ ಬಗ್ಗೆ ಸರಣಿ ಟ್ವೀಟ್ ಮಾಡಿ ಹಿಂದಿ ಭಾಷಾ ಹೇರಿಕೆಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು, ''ವಿವಿಧ ಭಾಷೆ, ವಿಭಿನ್ನ ಸಂಸ್ಕೃತಿ, ಪರಂಪರೆಗಳನ್ನು ಒಡಲಲ್ಲಿಟ್ಟುಕೊಂಡ ಭಾರತದಲ್ಲಿ, ಕನ್ನಡಿಗರೂ ಸೇರಿದಂತೆ ಅನ್ಯ ಭಾಷಿಕರ ಮೇಲೆ ಹಿಂದಿಯನ್ನು ಬಲವಂತವಾಗಿ ಹಲವು ಮಾರ್ಗಗಳ ಮೂಲಕ ಹೇರಲಾಗುತ್ತಿದೆ. ಇಂದಿನ ಹಿಂದಿ ದಿವಸ್ ಕೂಡ ಅಂಥದ್ದೇ ಅಪಮಾರ್ಗ. ಭಾಷಾ ಅಹಂಕಾರದ ಸಂಕೇತವಾದ ಹಿಂದಿ ದಿವಸಕ್ಕೆ ಸ್ವಾಭಿಮಾನಿ ಕನ್ನಡಿಗರ ಪ್ರಬಲ ವಿರೋಧವಿದೆ'' ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
''ಹಿಂದಿ ರಾಷ್ಟ್ರಭಾಷೆಯಲ್ಲ. ರಾಷ್ಟ್ರಭಾಷೆ ಎಂಬ ಕಲ್ಪನೆ ಸಂವಿಧಾನದಲ್ಲಿಲ್ಲ. ಆದರೂ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಬಿಂಬಿಸುವ, ಅದರಲ್ಲಿ ರಾಜಕೀಯ ಮಾಡುವ ಪ್ರಯತ್ನ ಹಿಂದಿನಿಂದಲೂ ನಡೆದೇ ಬಂದಿದೆ. ಅದು ಈಗ ವಿಪರೀತಕ್ಕೆ ಹೋಗಿದೆ. ದೇಶದ ಇತರೇ ಭಾಷಿಕರು ಇಂಥ ಪ್ರಯತ್ನಗಳ ವಿರುದ್ಧ ದಂಗೆ ಏಳುವುದಕ್ಕೂ ಮೊದಲು ಹಿಂದಿ ಹೇರಿಕೆ ನಿಲ್ಲಬೇಕು'' ಎಂದು ಆಗ್ರಹಿಸಿದ್ದಾರೆ.
''ಹಿಂದಿ ಹೇರಿಕೆಗೆ ಕಲಿಕೆ ನೆಪ ನೀಡಲಾಗುತ್ತಿದೆ. ಕಲಿಕೆ ಎಂದಿಗೂ ಆಯ್ಕೆಯೇ ಹೊರತು ಹೇರಿಕೆಯಿಂದ ಕಲಿಕೆಯಾಗಲು ಸಾಧ್ಯವಿಲ್ಲ. ಭಾಷೆಯೊಂದರ ಹೇರಿಕೆಯು ಇನ್ನೊಂದು ಭಾಷೆಯ ಅಸ್ಮಿತೆಯನ್ನು ಪ್ರಶ್ನಿಸುವಂತಿರಬಾರದು. ಭಾಷೆಯ ಹೇರಿಕೆಯು ಮತ್ತೊಂದು ಭಾಷೆಯ ಅವಸಾನಕ್ಕೆ ದಾರಿಯಾಗಬಾರದು. ದೇಶದ ಸಂಸ್ಕೃತಿ, ವೈವಿದ್ಯತೆ, ಸಮಗ್ರತೆಗೆ ಧಕ್ಕೆ ತರಬಾರದು'' ಎಂದು ತಿಳಿಸಿದ್ದಾರೆ.
''ಕೇಂದ್ರದ ಆಡಳಿತದಲ್ಲಿ ಹಿಂದಿ ಜಾರಿಗೆ ಬಂದಿದ್ದಕ್ಕಾಗಿ, ಹಿಂದಿ ಜಾರಿ ಹೋರಾಟ ಮಾಡಿದ ಬೋಹರ್ ರಾಜೇಂದ್ರ ಸಿಂಹ ಜನ್ಮದಿನದ ನೆನಪಿಗಾಗಿ ಸೆ. 14ರಂದು ಹಿಂದಿ ದಿವಸ ಆಚರಿಸಲಾಗುತ್ತಿದೆ. ರಾಜೇಂದ್ರ ಸಿಂಹ ಹುಟ್ಟುಹಬ್ಬದಲ್ಲಿ, ಹಿಂದಿ ಆಡಳಿತ ಭಾಷೆ ಆಗಿದ್ದರಲ್ಲಿ ಹಿಂದಿಯೇತರರು ಸಂಭ್ರಮಿಸುವುದು ಏನಿದೆ? ನಿರ್ಥಕ ಹಿಂದಿ ದಿವಸ ರದ್ದಾಗಬೇಕು'' ಎಂದು ಒತ್ತಾಯಿಸಿದ್ದಾರೆ.
''ಅನ್ಯ ಭಾಷಿಕರಿಗೆ ನಿರರ್ಥಕವಾಗಿರುವ ಹಿಂದಿ ದಿವಸವನ್ನು ಆಚರಿಸುವುದೇ ಆದರೆ, ಹಿಂದಿಯೊಂದಿಗೆ ಅಧಿಕೃತ ಭಾಷೆಗಳೆನಿಸಿರುವ ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳ ದಿನವನ್ನು ಕೇಂದ್ರ ಸರ್ಕಾರವೇ ದೇಶದಾದ್ಯಂತ ಆಚರಣೆ ಮಾಡಬೇಕು. ಇದಕ್ಕಾಗಿ ಪ್ರತ್ಯೇಕ ದಿನವನ್ನೂ ಘೋಷಣೆ ಮಾಡಬೇಕು. ನವೆಂಬರ್ 1 ಅನ್ನು ದೇಶದಾದ್ಯಂತ ಕನ್ನಡ ದಿನವಾಗಿ ಆಚರಿಸಬೇಕು'' ಎಂದು ಆಗ್ರಹಿಸಿದ್ದಾರೆ.
''ಸಂವಿಧಾನದ ಪರಿಚ್ಛೇದ 343, 344, 345ರಲ್ಲಿ ಹಿಂದಿಗೆ ಉತ್ತೇಜನ ನೀಡುವ ಗೊಂದಲಕಾರಿ ಅಂಶಗಳಿವೆ. ಇದೇ ಗುರಾಣಿ ಹಿಡಿದು ಹಿಂದಿ ಹೇರಿಕೆ ಪ್ರಯತ್ನಗಳು ನಿರಂತರವಾಗಿ ನಡೆದಿದೆ. ಸಂವಿಧಾನವನ್ನು ಬದಲಿಸಲೇ ಬಂದಿರುವ ಬಿಜೆಪಿಗರು, ಒಂದೊಳ್ಳೆ ಕಾರಣಕ್ಕಾಗಿ ಇದನ್ನು ಬದಲಿಸಲಿ. ಈ ಮೂಲಕ ಕನ್ನಡವೂ ಸೇರಿ ಅನ್ಯ ಭಾಷೆಗಳ ಅಸ್ಮಿತೆಯನ್ನು ರಕ್ಷಿಸಲಿ'' ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾರೆ.
''ಹಿಂದಿ ದಿವಸದಂತೇ, ತ್ರಿಭಾಷಾ ಸೂತ್ರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯೂ ಹಿಂದಿ ಹೇರಿಕೆಯ ಮಾರ್ಗವೇ. ದ್ವಿಭಾಷಾ ಸೂತ್ರವೇ ಇದ್ದರೆ ನಷ್ಟವೇನು? ಹಿಂದಿ ಮಾತನಾಡುವ ಯಾವ ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಜಾರಿಯಲ್ಲಿದೆ? ಹಾಗಿದ್ದಮೇಲೆ ಹಿಂದಿಯೇತರ ರಾಜ್ಯಗಳಿಗೆ ಮಾತ್ರ ಏಕೆ ತ್ರಿಭಾಷಾ ಸೂತ್ರ? ಎನ್ಇಪಿಯನ್ನು ರಾಜ್ಯ ಸರ್ಕಾರ ಒಪ್ಪಬಾರದು'' ಎಂದು ಒತ್ತಾಯಿಸಿದ್ದಾರೆ.
''ಇತ್ತೀಚೆಗೆ ಹಿಂದಿಯನ್ನು ಸಿದ್ಧಾಂತದ ವಿಚಾರವಾಗಿ ಪರಿವರ್ತಿಸಲಾಗಿದೆ. ರಾಷ್ಟ್ರೀಯತೆ, ದೇಶಭಕ್ತಿ, ಹಿಂದುತ್ವದೊಂದಿಗೆ ಹಿಂದಿಯನ್ನು ಸಮೀಕರಿಸಲಾಗಿದೆ. ಇಂಥ ಪ್ರಯತ್ನಗಳಿಗಿಂತಲೂ ದೊಡ್ಡ ದೇಶದ್ರೋಹ ಇನ್ನೊಂದಿಲ್ಲ. ವಿವಿಧ ಭಾಷೆಗಳನ್ನು ಆಡುವ ಭಾರತೀಯರ ದೇಶಭಕ್ತಿಯನ್ನು ಭಾಷೆ ಮೂಲಕ ಅಳೆಯುವುದು ಅಪಚಾರವೇ ಸರಿ. ಇದು ಸಮಗ್ರತೆಗೆ ಎಸೆದ ಸವಾಲು'' ಎಂದಿದ್ದಾರೆ.
''ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಹಿಂದಿಯನ್ನು ಸುಲಭವಾಗಿ ಹೇರಬಹುದು ಎಂದು ಹಿಂದಿ ಶ್ರೇಷ್ಠತೆ ವ್ಯಸನಿಗಳು ಅಂದಾಜಿಸಿದ್ದಾರೆ. ಇದಕ್ಕೆ ರಾಜ್ಯ ಬಿಜೆಪಿ ನಾಯಕರ ನಡತೆಯೂ ಕಾರಣವಿರಬಹುದು. ಕನ್ನಡಿಗರದ್ದು ಸೌಹಾರ್ದ ಗುಣ. ಅದನ್ನು ದೌರ್ಬಲ್ಯ ಎಂದೆಣಿಸುವುದು ಬೇಡ. ಕನ್ನಡಿಗರ ಐತಿಹಾಸಿಕವಾದ ಮತ್ತೊಂದು ಗುಣ ಸಿಡಿದರೆ ಎಲ್ಲರೂ ತರಗೆಲೆಗಳೇ'' ಎಂದು ಎಚ್ಚರಿಕೆ ನೀಡಿದ್ದಾರೆ.
''ಕಾವೇರಿಯಿಂದ ಗೋದಾವರಿವರೆಗೆ ಆಳಿದ, ಇಂದಿನ ಕರ್ನಾಟಕಕ್ಕಿಂತಲೂ ಹಲವು ಪಟ್ಟು ರಾಜ್ಯ ವಿಸ್ತರಣೆ ಮಾಡಿದ್ದ ಕನ್ನಡಿಗರಲ್ಲಿ ಶೌರ್ಯ, ಸ್ವಾಭಿಮಾನ ರಕ್ತಗತ. ಹಿಂದಿಯನ್ನು ಬಲವಂತವಾಗಿ ಹೇರುವ ಪ್ರಯತ್ನಗಳ ವಿರುದ್ಧ ಕನ್ನಡಿಗರ ಈ ಚಾರಿತ್ರಿಕ ಗುಣ ಎದ್ದು ನಿಂತರೆ ಹಿಂದಿ ಹೇರಲು ಬರುವವರ ಕುತಂತ್ರಗಳು ಅಡಗಲಿದೆ. ಜೈ ಕನ್ನಡಾಂಬೆ, ಜೈ ಭಾರತಾಂಬೆ'' ಎಂದು ಹೇಳಿದ್ದಾರೆ.