ಮಂಡ್ಯ, ಸೆ. 14 (DaijiworldNews/MB) : ಮಂಡ್ಯದ ಅರಕೇಶ್ವರ ದೇವಾಲಯದ ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆಗೈದು ಹುಂಡಿಯಲ್ಲಿದ್ದ ನೋಟುಗಳನ್ನು ಕದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸೋಮವಾರ ನಸುಕಿನಲ್ಲಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಈ ಮೂವರು ಆರೋಪಿಗಳು ಮದ್ದೂರು ತಾಲ್ಲೂಕು ಸಾದೊಳಲು ಗೇಟ್ನ ಬಸ್ ತಂಗುದಾಣದಲ್ಲಿ ಮಲಗಿದ್ದು ಪೊಲೀಸರು ಆರೋಪಿಗಳನ್ನು ಸುತ್ತುವರಿದು ಶರಣಾಗುವಂತೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಪೊಲೀಸರಿಗೆ ಹಲ್ಲೆ ಮಾಡಿ ಓಡಿ ಹೋಗಲು ಯತ್ನಿಸಿದ್ದು ಪೊಲೀಸರು ಕೂಡಲೇ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿ ಮದ್ದೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾಗೆಯೇ ಈ ಆರೋಪಿಗಳ ದಾಳಿಯಿಂದಾಗಿ ಗಾಯಗೊಂಡ ಒಬ್ಬರು ಸಬ್ ಇನ್ಸ್ಪೆಕ್ಟರ್, ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನೂ ಕೂಡಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಇನ್ನು ಈ ಆರೋಪಿಗಳು ತೊಪ್ಪನಹಳ್ಳಿ, ಸಾದೊಳಲು, ಹುಲಿಗೆರೆಪುರದ ನಿರ್ಜನ ಪ್ರದೇಶದಲ್ಲಿ ಶೆಡ್ ಹಾಕಿಕೊಂಡು ವಾಸಿಸುತ್ತಿದ್ದರು ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಅವರು, ಪೊಲೀಸರು ಆರೋಪಿಗಳಿಗೆ ಶರಣಾಗುವಂತೆ ತಿಳಿಸಿದ್ದು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಲಾಯಿತು. ಆದರೆ ಆರೋಪಿಗಳು ಪೊಲೀಸ್ ಸಿಬ್ಬಂದಿಗಳ ಮೇಲೆ ದಾಳಿ ನಡೆಸಲು ಆರಂಭಿಸಿದಾಗ ಅವರ ಕಾಲಿಗೆ ಗುಂಡು ಹಾರಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳ ಸಂಪೂರ್ಣ ವಿವರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಮುಜರಾಯಿ ಇಲಾಖೆಗೆ ಸೇರಿರುವ ಮಂಡ್ಯದ ಅರಕೇಶ್ವರ ದೇವಾಲಯದ ಮೂವರು ಅರ್ಚಕರಾದ ಗಣೇಶ್ (35), ಪ್ರಕಾಶ್ (36), ಆನಂದ್ (33) ಎಂಬವರು ದೇವಾಲಯದ ಪೂಜೆಯೊಂದಿಗೆ ದೇವಾಲಯದ ಕಾವಲು ಕೂಡಾ ಕಾಯುತ್ತಿದ್ದರು. ಗುರುವಾರ ರಾತ್ರಿ ಅರ್ಚಕರನ್ನು ಹತ್ಯೆ ಮಾಡಿ ಹುಂಡಿಯ ಹಣವನ್ನು ದೋಚಿರುವ ಕಳ್ಳರು, ಹುಂಡಿಯಲ್ಲಿನ ನೋಟುಗಳನ್ನು ಮಾತ್ರ ತೆಗೆದುಕೊಂಡು ಚಿಲ್ಲರೆ ಇರುವ ಹುಂಡಿಯನ್ನು ಆವರಣದಲ್ಲಿ ಎಸೆದು ಹೋಗಿದ್ದರು.
ಹತ್ಯೆಗೊಳಗಾದ ಅರ್ಚಕರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು 5 ಲಕ್ಷ ಪರಿಹಾರ ಘೋಷಿಸಿದ್ದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಶನಿವಾರ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಚೆಕ್ ಹಸ್ತಾಂತರ ಮಾಡಿದ್ದಾರೆ.