ನವದೆಹಲಿ, ಸೆ. 14 (DaijiworldNews/MB) : ಕೊರೊನಾಗೆ ಲಸಿಕೆ ಲಭಿಸುವವರೆಗೂ ನಿರ್ಲಕ್ಷ್ಯ ಸಲ್ಲದು ಎಂದು ಸಂಸತ್ ಮುಂಗಾರು ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಇಂದಿನಿಂದ 18 ದಿನಗಳ ಕಾಲ ಅಧಿವೇಶನ ನಡೆಯುತ್ತಿದ್ದು ಇಂದು ಬೆಳಗ್ಗೆ ಸಂಸತ್ ಭವನಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕೊರೊನಾ ನಡುವೆಯೂ ನಾವು ನಮ್ಮ ಕರ್ತವ್ಯ ನಿರ್ವಹಣೆ ಮಾಡಬೇಕಾಗಿದ್ದು ಸಂಸದರು ಕಾರ್ಯ ನಿರ್ವಹಿಸುತ್ತಿರುವ ಸಂಸದರನ್ನು ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಬಾರಿ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ಒಂದೇ ದಿನ ಬೇರೆ ಬೇರೆ ಸಮಯಗಳಲ್ಲಿ ನಡೆಯುತ್ತಿದ್ದು ಶನಿವಾರ ಭಾನುವಾರಗಳಂದು ಕೂಡಾ ನಡೆಯಲಿದೆ. ಎಲ್ಲಾ ಸಂಸದರು ಇದಕ್ಕೆ ಬದ್ದರಾಗಿದ್ದಾರೆ. ಹಲವು ವಿಚಾರಗಳ ಬಗ್ಗೆ ಈ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ. ಉತ್ತಮ ವಿಚಾರಗಳ ಬಗ್ಗೆ ಚರ್ಚೆ ನಡೆದರೆ ಹೊರ ಬರುವ ಫಲಿತಾಂಶ ಉತ್ತಮವಾಗಿರುತ್ತದೆ ಎಂದು ಹೇಳಿದರು.
ಲಸಿಕೆ ಎಲ್ಲಿಯವರೆಗೆ ಬರದೋ ಅಲ್ಲಿಯವರೆಗೆ ನಿರ್ಲಕ್ಷ್ಯ ಸಲ್ಲದು. ಶೀಘ್ರವೇ ಜಗತ್ತಿನ ಯಾವ ಮೂಲೆಯಲ್ಲಾದರೂ ಲಸಿಕೆ ಕಂಡು ಹಿಡಿದು ಮಾರುಕಟ್ಟೆಗೆ ಬರಲಿದೆ. ವಿಜ್ಞಾನಿಗಳು ಇದಕ್ಕಾಗಿ ಪಣತೊಟ್ಟು ಜನರ ಸಂಕಷ್ಟ ನೀಗಿಸಬೇಕು ಎಂದು ನನ್ನ ಮನವಿ ಎಂದು ಹೇಳಿದ ಅವರು, ಈ ಪರಿಸ್ಥಿತಿಯಲ್ಲಿಯೂ ಗಡಿಯನ್ನು ಕಾಯುತ್ತಿರುವ ಸೈನಿಕರ ಪರವಾಗಿ ಇಡೀ ದೇಶ ಬೆಂಬಲಕ್ಕೆ ನಿಂತಿದೆ ಎಂದು ಹೇಳಿದರು.