ನವದೆಹಲಿ, ಸೆ. 14 (DaijiworldNews/MB) : ಕೊರೊನಾ ಸೋಂಕು ಪ್ರಕರಣಗಳ ಏರಿಕೆ ಹಾಗೂ ಆರ್ಥಿಕ ಪರಿಸ್ಥಿತಿ ವಿಚಾರವಾಗಿ ನಿರಂತರವಾಗಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ಚಾಟಿ ಬೀಸಿದ್ದು 'ಪ್ರಧಾನಿ ಮೋದಿ ನವಿಲುಗಳ ಜೊತೆ ಬ್ಯುಸಿಯಾಗಿದ್ದಾರೆ, ನಿಮ್ಮ ಜೀವನವನ್ನು ನೀವೇ ಕಾಪಾಡಿಕೊಳ್ಳಿ' ಎಂದು ಹೇಳಿದ್ದಾರೆ.
ಕಳೆದ ತಿಂಗಳು ಪ್ರಧಾನಿಯವರು ತಮ್ಮ ಕಚೇರಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೊವನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು, ಕೊರೊನಾ ಸೋಂಕಿನ ಅಂಕಿ ಅಂಶಗಳು ಈ ವಾರ 50 ಲಕ್ಷ ದಾಟಬಹುದು. ಕ್ರಿಯ ಪ್ರಕರಣಗಳೇ 10 ಲಕ್ಷವಾಗಬಹುದು. ಯೋಜಿತವಲ್ಲದ ಲಾಕ್ಡೌನ್ ಓರ್ವ ವ್ಯಕ್ತಿಯ ಅಹಂಕಾರದ ಕೊಡುಗೆಯಾಗಿದ್ದು ಇದರಿಂದಾಗಿ ದೇಶದಾದ್ಯಂತ ಕೊರೊನಾ ಹರಡಿದೆ. ಪ್ರಧಾನಿ ಮೋದಿ ಸರ್ಕಾರವು ಆತ್ಮನಿರ್ಭರರಾಗುವಂತೆ ತಿಳಿಸಿದ್ದಾರೆ. ಅಂದರೆ ನಿಮ್ಮ ಪ್ರಾಣವನ್ನು ನೀವೇ ಕಾಪಾಡಿಕೊಳ್ಳಿ ಏಕೆಂದರೆ ಪ್ರಧಾನಿ ಮೋದಿ ನವಿಲುಗಳ ಜೊತೆ ಬ್ಯುಸಿಯಾಗಿದ್ದಾರೆ ಎಂದು ಪ್ರಧಾನಿ ಕಾಲೆಳಿದಿದ್ದಾರೆ.
ರಾಹುಲ್ ಗಾಂಧಿಯವರು ತಮ್ಮ ತಾಯಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ತೆರಳಿದ್ದು ಸೋಮವಾರ ಆರಂಭವಾಗಿರುವ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ಭಾಗದಲ್ಲಿ ಅನುಪಸ್ಥಿತರಿರುತ್ತಾರೆ ಎಂದು ವರದಿಯಾಗಿದೆ.