ನವದೆಹಲಿ, ಸೆ. 14 (DaijiworldNews/MB) : ಇಂದಿನಿಂದ 18 ದಿನಗಳ ಕಾಲ ಸಂಸತ್ತಿನಲ್ಲಿ ಉಭಯ ಸದನಗಳ ಮುಂಗಾರು ಅಧಿವೇಶನ ಆರಂಭವಾಗಿದ್ದು ಲೋಕಸಭೆ ಕಲಾಪ ಆರಂಭವಾದಗಲೇ ಕೇಂದ್ರ ಸರ್ಕಾರದ ಪ್ರಶ್ನೋತ್ತರ, ಶೂನ್ಯ ಅವಧಿ ರದ್ದು ನಿರ್ಣಯ ಕುರಿತು ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಕಲಾಪದ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಇತರೆ ಗಣ್ಯಾತಿಗಣ್ಯರಿಗೆ ಸಂತಾಪ ಸೂಚಿಸಲಾಗಿದ್ದು ಬಳಿಕ ಒಂದು ಗಂಟೆಗಳ ಕಾಲ ಕಲಾಪವನ್ನು ಮುಂದೂಡಲಾಗಿತ್ತು. ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳು ಪ್ರಶ್ನೋತ್ತರ, ಶೂನ್ಯ ಅವಧಿ ರದ್ದು ನಿರ್ಣಯದ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ಈ ಬಗ್ಗೆ ಮಾತನಾಡಿದ ಲೋಕಸಭಾ ಕಾಂಗ್ರೆಸ್ ಸಂಸದ ಅಧಿರ್ ರಂಜನ್ ಚೌಧರಿಯವರು, ''ಪ್ರಶೋತ್ತರ ಅವಧಿ ಗೋಲ್ಡನ್ ಅವಧಿ ಇದ್ದಂತೆ. ಆದರೆ ನೀವು ಈಗೀನ ಪರಿಸ್ಥಿತಿಯ ಕಾರಣ ನೀಡಿ ಈ ಅವಕಾಶವನ್ನು ರದ್ದು ಮಾಡುವುದಾಗಿ ಹೇಳುತ್ತೀರಿ. ಕಲಾಪ ನಡೆಸಿ ಆದರೆ ಪ್ರಶ್ನೋತ್ತರಕ್ಕೂ ಅವಕಾಶ ಬೇಕು. ಹಾಗೆಯೇ ನೀವು ಶೂನ್ಯ ಅವಧಿಯನ್ನು ರದ್ದು ಮಾಡುವ ಮುಖಾಂತರ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡುವ ಯತ್ನ'' ಎಂದು ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಲೋಕಸಭಾ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿಯವರು ಮಾತನಾಡಿ, ''ಇದು ಬಹಳ ಸಂಕಷ್ಟದ ಕಾಲವಾಗಿದೆ. ಈ ಸಂದರ್ಭದಲ್ಲೂ ನಾವು ಇಲ್ಲ 800-850 ಸಂಸದರು ಒಟ್ಟಿಗೆ ಸೇರಿದ್ದೇವೆ. ಸರ್ಕಾರವನ್ನು ಪ್ರಶ್ನೆ ಮಾಡಲು ಬೇಕಾದಷ್ಟು ದಾರಿಯಿದೆ. ಯಾವುದೇ ಚರ್ಚೆಯಿಂದಲೂ ಸರ್ಕಾರ ತಪ್ಪಿಸಿಕೊಳ್ಳುವುದಿಲ್ಲ. ನಾವು ಎಲ್ಲಾ ವಿಚಾರಗಳ ಚರ್ಚೆಗೆ ಸಿದ್ದ'' ಎಂದು ಪ್ರತ್ಯುತ್ತರ ನೀಡಿದರು.