ಮುಂಬೈ, ಸೆ.14(DaijiworldNews/HR): ಬಾಲಿವುಡ್ ನಟಿ ಕಂಗನಾ ರಾಣಾವತ್ ಮುಂಬೈ ತೊರೆಯುವುದಾಗಿ ಪ್ರಕಟಿಸಿದ್ದಾರೆ.
ಈ ಬಗ್ಗೆ ತಮ್ಮ ಟ್ವೀಟ್ ಮೂಲಕ ಪ್ರಕಟಿಸಿರುವ ಅವರು, ಭಾರವಾದ ಹೃದಯಗಳಿಂದ ಮುಂಬೈ ತೊರೆಯುತ್ತಿದ್ದೇನೆ. ಇಷ್ಟು ದಿನ ನನ್ನ ಮೇಲೆ ನಿರಂತರ ದಾಳಿ ಮಾಡುತ್ತಾ, ಭಯೋತ್ಪಾದಕರಂತೆ ನನ್ನ ಮೇಲೆ ಬೆದರಿಕೆ ಹಾಕಿದ್ದು, ನಿಂದನೆ ಮಾಡಿದ್ದು, ನನ್ನ ಕಚೇರಿಯನ್ನು ಧ್ವಂಸ ಮಾಡಿದ್ದು, ನನ್ನ ಸುತ್ತ ಭದ್ರತೆ ಇರುವಂತೆ ಮಾಡಿದ್ದು ಇವುಗಳೆಲ್ಲವನ್ನೂ ನೋಡಿದಾಗ ಮುಂಬೈ ಪಾಕ್ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ ಎಂದು ನಾನು ಹೇಳಿದ ಮಾತು ಸತ್ಯವೆನ್ನುವುದು ಮತ್ತಷ್ಟು ಸಾಬೀತಾಗುತ್ತಿದೆ ಎಂಬುದಾಗಿ ಬರೆದುಕೊಂಡಿದ್ದಾರೆ.
ಬೃಹನ್ ಮುಂಬೈ ಮಹಾನಗರ ಪಾಲಿಕೆ ಕಂಗನಾ ಅವರ ಕಚೇರಿಯ ಒಂದು ಭಾಗವನ್ನು ಧ್ವಂಸಗೊಳಿಸಿತ್ತು. ಇದು ಶಿವಸೇನೆಯ ರಾಜಕೀಯ ಪಿತೂರಿ ಕೃತ್ಯ ಎಂದು ಕಂಗನಾ ಆರೋಪಿಸಿದ್ದರು. ಇದಕ್ಕೂ ಮುನ್ನ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಹೋಲಿಸಿ ಕಂಗನಾ ಮತ್ತು ಶಿವಸೇನಾ ನಾಯಕರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು.
ಇನ್ನು ಹಿಂದಿಯಲ್ಲಿ ಮತ್ತೊಂದು ಟ್ವೀಟ್ ನಲ್ಲಿ ಕಂಗನಾ, ನಮ್ಮನ್ನು ಕಾಪಾಡುವವರೇ ಕೊಲ್ಲುವವರಾದಾಗ ಅವರು ಪ್ರಜಾಪ್ರಭುತ್ವಕ್ಕೆ ನೋವುಂಟುಮಾಡುವವರು, ಧಕ್ಕೆ ತರುವವರು ಆಗಿರುತ್ತಾರೆ. ನಾನು ದುರ್ಬಳಲು ಎಂದು ಭಾವಿಸಿಕೊಂಡು ದೊಡ್ಡ ತಪ್ಪು ಮಾಡುತ್ತಿದ್ದಾರೆ. ನನ್ನನ್ನು ಹೆದರಿಸಲು ಪ್ರಯತ್ನಿಸುವ ಮೂಲಕ, ನನ್ನನ್ನು ಕೀಳಾಗಿ ನೋಡುವ ಮೂಲಕ, ಅವರು ತಮ್ಮ ನಿಜವಾದ ರೂಪವನ್ನು, ಬುದ್ದಿಯನ್ನು ತೋರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.