ಬೆಂಗಳೂರು, ಸೆ.14(DaijiworldNews/HR): ನಾನು ಯಾವ ತಪ್ಪು ಮಾಡಿಲ್ಲ, ಡ್ರಗ್ಸ್ ದಂಧೆ ವಿಚಾರದಲ್ಲಿ ನನ್ನ ಹೆಸರು ತಳುಕು ಹಾಕಿ, ನನ್ನನ್ನು ರಾಜಕೀಯವಾಗಿ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಜನಾ ನನ್ನ ಜೊತೆ ಕೊಲಂಬೋಗೆ ಹೋಗಿದ್ದಾರೆ ಎಂದು ಮಾಧ್ಯಮಗಳಲ್ಲಿ ಆರೋಪ ಮಾಡಿದ್ದಾರೆ. ಸಂಜನಾ ಏನಾದರೂ ದಾಖಲೆ ಕೊಟ್ಟಿದ್ದಾರೆಯೇ? ಈಗ ಸಂಜನಾ ಬಿಟ್ಟು ಫಾಸಿಲ್ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಎಲ್ಲೂ ತಪ್ಪು ಮಾಡಿಲ್ಲ.ಪೊಲೀಸರು ತನಿಖೆ ಮಾಡುತ್ತಿದ್ದಾರೆ.ನಂತರ ಸತ್ಯ ಹೊರಬರಲಿದೆ ಎಂದರು. ಸಂಜನಾ ಜೊತೆ ಜಮೀರ್ ಹೋಗಿದ್ದರು ಎಂದು ಹೇಳಿರುವ ಸಂಬರಗಿ, ನಾನು ಅವರ ಜೊತೆ ಹೋಗಿರುವ ಒಂದು ಫೋಟೋ ತೋರಿಸಲಿ ಎಂದರು.
ಈ ಎಲ್ಲ ಆರೋಪದ ಹಿಂದೆ ಎಲ್ಲೋ ಒಂದು ಕಡೆ ರಾಜಕೀಯ ಕೈವಾಡ ಇದೆ. ನಾನು ಬೆಳೆಯುತ್ತಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನನ್ನನ್ನು ಮುಗಿಸಬೇಕು ಎಂದು ತೀರ್ಮಾನ ಮಾಡಿದ್ದಾರೆ. ಆದರೆ ನಮ್ಮ ರಾಜ್ಯ ಪೋಲೀಸರು ನಂಬರ್ ಒನ್. ಅವರ ಬಗ್ಗೆ ನನಗೆ ವಿಶ್ವಾಸವಿದೆ. ಸಂಬರಗಿ ವಿರುದ್ಧ ಪೋಲೀಸರಿಗೆ ದೂರು ಕೊಟ್ಟಿದ್ದೇನೆ, ಕಾನೂನು ಹೋರಾಟ ನಡೆಯುತ್ತಿದೆ. ಪೋಲೀಸ್ ತನಿಖೆ ನಡೆಸುತ್ತಿದ್ದಾರೆ ಎಂದು ಶಾಸಕ ಜಮೀರ್ ಹೇಳಿದ್ದಾರೆ.
ಇನ್ನು ಕೊಲಂಬೋಗೆ ನನ್ನ ಕುಟುಂಬದೊಡನೆ ಪ್ರವಾಸ ಹೋಗಿದ್ದೇನೆ. ಕುಮಾರಸ್ವಾಮಿ ಜತೆಗೂ ಹೋಗಿದ್ದೇನೆ. ಜೆಡಿಎಸ್ ನ ಶಾಸಕರ ಜತೆಗೂ ಹೋಗಿದ್ದೇನೆ. ಕೊಲಂಬೋಗೆ ಹೋದರೆ ಕ್ಯಾಸಿನೋಗೆ ಹೋದಂತೆ ಅರ್ಥನಾ? ಮನಸ್ಸಿನ ಶಾಂತಿ, ನೆಮ್ಮದಿಗಾಗಿ ಪ್ರವಾಸ ಹೋಗುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಜಮೀರ್ ಸ್ಪಷ್ಟನೆ ಕೊಟ್ಟಿದ್ದಾರೆ.