ನವದೆಹಲಿ, ಸೆ. 14 (DaijiworldNews/MB) : ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವಿಧಿಸಿದ್ದ ರೂ. 1 ದಂಡವನ್ನು ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅವರು ಸೋಮವಾರ ಸುಪ್ರೀಂಕೋರ್ಟ್ ರಿಜಿಸ್ಟ್ರಿಗೆ ಪಾವತಿಸಿದರು. ಬಳಿಕ ಮಾತನಾಡಿದ ಅವರು, 'ದಂಡ ಪಾವತಿಸಿದ ಮಾತ್ರಕ್ಕೆ ಕೋರ್ಟ್ ಆದೇಶವನ್ನು ಒಪ್ಪಿದ್ದೇನು ಎಂದು ಅರ್ಥವಲ್ಲ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಭೂಷಣ್ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿ ಒಂದು ರೂಪಾಯಿ ದಂಡ ವಿಧಿಸಿತ್ತು. ಹಾಗೆಯೇ ಸೆ.15ರ ಒಳಗಾಗಿ ದಂಡ ಪಾವತಿಸುವಂತೆ ಸೂಚಿಸಿತ್ತು. ಇದೀಗ ಸೋಮವಾರ ಸುಪ್ರೀಂಕೋರ್ಟ್ ರಿಜಿಸ್ಟ್ರಿಗೆ ದಂಡ ಪಾವತಿಸಿರುವ ಪ್ರಶಾಂತ್ ಅವರು, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಮರುಪರಿಶೀಲನೆಗೆ ಒಳಪಡಿಸಲು ಅರ್ಜಿ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಹಾಗೆಯೇ 'ದಂಡ ಪಾವತಿಸಿದ ಮಾತ್ರಕ್ಕೆ ಕೋರ್ಟ್ ಆದೇಶವನ್ನು ಒಪ್ಪಿದ್ದೇನು ಎಂದು ಅರ್ಥವಲ್ಲ' ಎಂದು ಕೂಡಾ ಹೇಳಿದ್ದಾರೆ.
ಇನ್ನು ನ್ಯಾಯಾಂಗ ನಿಂದನೆ ಕ್ರಿಮಿನಲ್ ಪ್ರಕರಣವನ್ನು ಬೇರೊಂದು ವಿಸ್ತೃತ ಪೀಠದಲ್ಲಿ ಪ್ರಶ್ನಿಸುವ ಅಧಿಕಾರ ನೀಡುವಂತೆ ಕೋರಿ ಶನಿವಾರ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದಾರೆ.
ಜೂನ್ ತಿಂಗಳಲ್ಲಿ ಪ್ರಶಾಂತ್ ಭೂಷಣ್ ಅವರು ಮಾಡಿದ್ದ ಟ್ವೀಟ್ಗಳು ಭಾರೀ ಚರ್ಚೆಗೆ ಕಾರಣವಾಗಿದ್ದು ಈ ಟ್ವೀಟ್ಗಳು ಸುಪ್ರೀಂಕೋರ್ಟ್ ಹಾಗೂ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕಚೇರಿಯ ಘನತೆಗೆ ಚ್ಯುತಿ ತರುವಂತ್ತಿದ್ದು ಭೂಷಣ್ ದೋಷಿ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಕ್ಷಮೆಯಾಚಿಸಲು ಹೇಳಿದಾಗ ಅದನ್ನು ನಿರಾಕರಿಸಿದ ಭೂಷಣ್ ಅವರು ದಂಡ ಪಾವತಿಸುತ್ತೇನೆ ಆದರೆ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದರು.
ಹಾಗೆಯೇ ಸುಪ್ರೀಂ ಕೋರ್ಟ್ ಒಂದು ರೂಪಾಯಿ ದಂಡ ವಿಧಿಸಿದ ಬಳಿಕ ಮಾತನಾಡಿದ್ದ ಭೂಷಣ್ ಅವರು ನಾನು ಓರ್ವ ವ್ಯಕ್ತಿಯ ವೈಯಕ್ತಿಕ ವಿಚಾರವನ್ನು ಟ್ವೀಟ್ ಮಾಡಿದ್ದೇನೆ. ಆದರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಹೇಳಲಾಗುತ್ತಿದೆ. ನಾನು ಈ ಹಿಂದೆಯೇ ಹೇಳಿದಂತೆ ದಂಡ ಪಾವತಿಸುತ್ತೇನೆ ಎಂದು ಹೇಳಿದ್ದರು.