ನವದೆಹಲಿ, ಸೆ.14(DaijiworldNews/HR): ಕೊರೊನಾ ಸೋಂಕು ಹರಡುವ ಅಪಾಯವಿರುವುದರಿಂದ ಕಡ್ಡಾಯವಾಗಿ ಅಂತರ ಕಾಪಾಡಿಕೊಳ್ಳಬೇಕು, ಸಂಸತ್ತಿನ ಎಲ್ಲಾ ಸದಸ್ಯರೂ ಕುಳಿತುಕೊಂಡೇ ಮಾತನಾಡಬೇಕು ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಹೇಳಿದ್ದಾರೆ.
ಇಂದು 18 ದಿನಗಳ ಮುಂಗಾರು ಅಧಿವೇಶನ ಆರಂಭವಾಗಿದ್ದು ಮೊದಲ ದಿನ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೂ ಲೋಕಸಭೆ ಕಲಾಪ ನಡೆಯಿತು. ಮಧ್ಯಾಹ್ನ 3ರಿಂದ ರಾಜ್ಯಸಭೆ ಕಲಾಪ ನಿಗದಿಯಾಗಿದೆ. ಇತರ ದಿನಗಳಲ್ಲಿ ಬೆಳಗಿನ ಅವಧಿಯಲ್ಲಿ ನಾಲ್ಕು ಗಂಟೆಗಳ ಕಾಲ ರಾಜ್ಯಸಭೆ ಹಾಗೂ ಸಂಜೆ ಲೋಕಸಭೆ ಕಲಾಪಗಳು ಜರುಗಲಿವೆ.
ಇನ್ನು ಇದೆ ಮೊದಲ ಬಾರಿಗೆ ಸದಸ್ಯರ ಸುರಕ್ಷತೆ ಹಾಗೂ ಅನುಕೂಲದ ದೃಷ್ಟಿಯಿಂದ ಎರಡೂ ಸದನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಕೆಲ ಸದಸ್ಯರಿಗೆ ಸಂದರ್ಶಕರ ಗ್ಯಾಲರಿಯಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಬಿಕ್ಕಟ್ಟಿನ ಕಾರಣ ಈ ಕ್ರಮ ಕೈಗೊಳ್ಳಲಾಗಿದ್ದು ಕಲಾಪವು ಸುಗಮವಾಗಿ ನಡೆಯಲು ಎಲ್ಲರೂ ಸಹಕರಿಸಬೇಕು' ಎಂದು ಸ್ಪೀಕರ್ ಬಿರ್ಲಾ ತಿಳಿಸಿದರು.
'ಸಂಸತ್ತಿನಲ್ಲಿ ಎಲ್ಲರೂ ಕುಳಿತುಕೊಂಡೇ ಮಾತನಾಡುವುದು ಕಡ್ಡಾಯ. ತಜ್ಞರ ಸಲಹೆ ಮೇರೆಗೆ ಈ ಕ್ರಮ ಕೈಗೊಂಡಿದ್ದೇನೆ. ಇದರಿಂದ ನಿಮಗೆಲ್ಲಾ ತುಂಬಾ ತೊಂದರೆಯಾಗಬಹುದು. ಈ ಮಾರ್ಗವನ್ನು ಅನುಸರಿಸದೆ ಬೇರೆ ಆಯ್ಕೆ ನನಗಿಲ್ಲ ಎಂದೂ ಅವರು ಹೇಳಿದರು.