ಹೈದರಾಬಾದ್, ಸೆ.14(DaijiworldNews/HR): ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ 19 ವರ್ಷದ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅಪ್ರಾಪ್ತ ಬಾಲಕ ಸೇರಿದಂತೆ ಮೂರು ಮಂದಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 7ರಂದು ಯುವತಿ ಬಾಲಾಪುರ್ ಎಂಬಲ್ಲಿ ರಿಕ್ಷಾ ಹತ್ತಿದ್ದಳು. ಈ ಸಂದರ್ಭದಲ್ಲಿ ಇಬ್ಬರು ಆರೋಪಿಗಳು ಕೂಡಾ ರಿಕ್ಷಾ ಹತ್ತಿದ್ದರು. ನಂತರ ಆಕೆ ಜತೆ ಅನುಚಿತವಾಗಿ ವರ್ತಿಸಲು ಆರಂಭಿಸಿ, ಬಳಿಕ ಆಕೆಯನ್ನು ಬಲವಂತವಾಗಿ ಆಟೋದಿಂದ ಕೆಳಗಿಳಿಸಿ ಬೈಕ್ ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ನಂತರ ಅಪ್ರಾಪ್ತ ಬಾಲಕ ಆ ಸ್ಥಳಕ್ಕೆ ಬಂದಿದ್ದು, ಮೂವರು ಕಂಠಪೂರ್ತಿ ಮದ್ಯ ಸೇವಿಸಿದ್ದರು. ಅಷ್ಟೇ ಅಲ್ಲ ಯುವತಿಗೂ ಬಲವಂತವಾಗಿ ಮದ್ಯವನ್ನು ಕುಡಿಸಿದ್ದರು. ಅಮಲಿನಲ್ಲಿದ್ದ ಆಕೆಯ ಮೇಲೆ ಮೂವರು ಅತ್ಯಾಚಾರ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನು ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಕೆಲವು ದಿನದ ನಂತರ ತನ್ನ ತಾಯಿ ಜತೆ ರಾಚಕೊಂಡ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಹೀಗೆ ದೂರು ಸ್ವೀಕರಿಸಿದ ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಪಹರಣ, ಬಲವಂತ ಹಾಗೂ ಅತ್ಯಾಚಾರ ಆರೋಪದಡಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.