ಬಾಗಲಕೋಟೆ, ಸೆ. 14 (DaijiworldNews/MB) : ಡ್ರಗ್ಸ್ ಜಾಲದಲ್ಲಿ ಭಾಗಿ ಆರೋಪದ ಹಿನ್ನೆಲೆಯಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರು, ''ಸಾಕ್ಷಿಯಿದ್ದರೆ ಕ್ರಮ ಕೈಗೊಳ್ಳಿ'' ಎಂದು ಸವಾಲೆಸೆದಿದ್ದಾರೆ.
ಈ ಬಗ್ಗೆ ಬಾದಾಮಿ ತಾಲ್ಲೂಕಿನ ಗೋವನಕೊಪ್ಪದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಫಾಸಿಲ್ ಜೊತೆ ಸಿದ್ದರಾಮಯ್ಯ, ಜಮೀರ್ ಫೋಟೋ ಏನು ಹೇಳುತ್ತೆ'' ಎಂದು ಸಚಿವ ಸಿ.ಟಿ. ರವಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ''ಬಿಜೆಪಿ ಅಭ್ಯರ್ಥಿ ಪರ ನಟಿ ರಾಗಿಣಿ ಜೊತೆ ಸೇರಿ ಪ್ರಚಾರ ಮಾಡಿದ್ದಾರೆ. ಅದಕ್ಕೆ ಬಿ.ವೈ.ವಿಜಯೇಂದ್ರ ಡ್ರಗ್ಸ್ ಜಾಲದಲ್ಲಿದ್ದಾರೆ ಎಂದು ನಾನು ಕೂಡಾ ಹೇಳಲಾ'' ಎಂದು ಪ್ರಶ್ನಿಸಿದರು.
''ನನಗೆ ಈ ಫಾಸಿಲ್ ಯಾರೆಂದೇ ತಿಳಿದಿಲ್ಲ. ನಮ್ಮೊಂದಿಗೆ ಯಾರ್ಯಾರೋ ಬಂದು ಪೋಟೋ ತೆಗೆತಾರೆ. ಕಳ್ಳರೂ ಬಂದು ಫೋಟೋ ತೆಗೆಸಿಕೊಳ್ಳಬಹುದು. ಫೋಟೋ ಯಾರ ಜೊತೆ ಇದೆ ಎನ್ನುವುದ ಮುಖ್ಯವಲ್ಲ. ಡ್ರಗ್ಸ್ ಜಾಲದಲ್ಲಿ ಇದ್ದಾರಾ ಎಂಬುವುದು ಮುಖ್ಯ. ಸಾಕ್ಷಿಯಿದ್ದರೆ ಪೊಲೀಸರು ಕ್ರಮ ಕೈಗೊಳ್ಳಲಿ'' ಎಂದು ಹೇಳಿದರು.
ಇನ್ನು ''ಶಾಸಕ ಜಮೀರ್ ಅಹಮದ್ ಡ್ರಗ್ಸ್ ಜಾಲದಲ್ಲಿದ್ದಾನೆ ಅನ್ನೋದಕ್ಕೂ ಸಾಕ್ಷ್ಯ ಬೇಕಲ್ಲಪ್ಪಾ'' ಎಂದು ಕೂಡಾ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.