ಧಾರವಾಡ, ಸೆ.14(DaijiworldNews/HR): ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶಾಸಕ ಜಮೀರ್ ಅಹಮದ್ ಕ್ಯಾಸಿನೋಗೆ ಹೋಗಿದ್ದು ತಪ್ಪಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ಸಮರ್ಥನೆಯಿಂದ ಸಿದ್ದರಾಮಯ್ಯ ತಮ್ಮ ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಈ ಬಗ್ಗೆ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾಸಿನೋಗೆ ಹೋಗಬಾರದು, ಜೂಜು ಆಡಬಾರದು ಎಂದು ಸಿದ್ದರಾಮಯ್ಯ ಹೇಳಬೇಕಿತ್ತು. ಆದರೆ, ಜಮೀರ್ ಕ್ಯಾಸಿನೋಗೆ ಹೋಗಿದ್ದು ತಪ್ಪಲ್ಲ ಎಂದು ಹೇಳುವುದು ಎಷ್ಟು ಸರಿ ಎಂದರು. ಈ ಹಿಂದೆ ಜಿ.ಪರಮೇಶ್ವರ ಅವರು ಗೃಹ ಸಚಿವರಾಗಿದ್ದ ವೇಳೆಯೂ ಡ್ರಗ್ಸ್ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯ ಮಾಡಿದ್ದೆವು. ಅವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ಎಲ್ಲವೂ ಸ್ಪೋಟಗೊಂಡಿದೆ. ನಮ್ಮ ಸರ್ಕಾರ ಬಹಳ ಗಂಭೀರವಾಗಿ ಈ ಬಗ್ಗೆ ತನಿಖೆ ನಡೆಸುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಇಂತಹ ಪ್ರಕರಣಗಳು ಹೊರಗಡೆ ಬರಲಿಲ್ಲ. ಅವರು ಅಧಿಕಾರದಲ್ಲಿದ್ದಾಗ ಇಂತಹ ಚಟುವಟಿಕೆಗಳಿಗೆ ರಕ್ಷಣೆ ಕೊಟ್ಟಿದ್ದರು ಎಂದರು.
ಇನ್ನು ಅನೇಕ ಯುವಕರು ಡ್ರಗ್ಸ್ ಗೆ ಬಹಳ ಅಡಿಕ್ಟ್ ಆಗುತ್ತಿದ್ದಾರೆ. ಅದನ್ನು ತಪ್ಪಿಸಬೇಕಾಗಿದೆ. ಇದನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದ್ದು, ಇನ್ನೂ ಕೆಲವೊಂದಿಷ್ಟು ವ್ಯಕ್ತಿಗಳು ತನಿಖೆಯಿಂದ ತಪ್ಪಿತಸ್ಥರು ಎಂಬುದು ಗೊತ್ತಾಗಲಿದೆ ಎಂದರು.