ನವದೆಹಲಿ, ಸೆ. 15 (DaijiworldNews/MB) : ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹಠತ್ತನೆ ರಾಷ್ಟ್ರವ್ಯಾಪಿ ಮಾಡಲಾದ ಲಾಕ್ಡೌನ್ ಸಂದರ್ಭದಲ್ಲಿ ಎಷ್ಟು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ ಹಾಗೂ ಎಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ಬಗ್ಗೆ ಯಾವುದೇ ಅಂಕಿ ಅಂಶವಿಲ್ಲ ಎಂದು ಕೇಂದ್ರವು ಸೆಪ್ಟೆಂಬರ್ 14 ರ ಸೋಮವಾರ ಸಂಸತ್ತಿಗೆ ಮಾಹಿತಿ ನೀಡಿದೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ನೀಡಿದ ಲಿಖಿತ ಉತ್ತರದಲ್ಲಿ ಅಂತಹ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಹೇಳಿದೆ.
ಸಂತ್ರಸ್ತೆಯ ಕುಟುಂಬಕ್ಕೆ ಯಾವುದೇ ಪರಿಹಾರ ಅಥವಾ ಪರಿಹಾರವನ್ನು ನೀಡಲಾಗಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲದ ಕಾರಣ ಪರಿಹಾರದ ಪ್ರಶ್ನೆಯು ಉದ್ಭವಿಸುವುದಿಲ್ಲ ಎಂದು ಹೇಳಿದೆ.
ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಉದ್ಯೋಗ ನಷ್ಟದ ಬಗ್ಗೆಯೂ ಮಾಹಿತಿ ಇಲ್ಲ. ಆ ರೀತಿಯ ಯಾವುದೇ ಮಾಹಿತಿಯನ್ನು ಸಂಗ್ರಹಿಸಲಾಗುವುದಿಲ್ಲ ಎಂದು ಕೇಂದ್ರ ಹೇಳಿದೆ.
ಈ ವರ್ಷದ ಏಪ್ರಿಲ್ನಲ್ಲಿ ನಡೆದ ವಿಶ್ವಬ್ಯಾಂಕ್ ವರದಿಯ ಪ್ರಕಾರ, ಮಾರ್ಚ್ 25 ರಂದು ಜಾರಿಗೆ ತರಲಾದ ರಾಷ್ಟ್ರವ್ಯಾಪಿ ಲಾಕ್ಡೌನ್ ಸಂದರ್ಭ 40 ದಶಲಕ್ಷ ವಲಸಿಗರ ಜೀವನದ ಮೇಲೆ ಪರಿಣಾಮ ಬೀರಿದೆ.
ವಿಶ್ವಬ್ಯಾಂಕ್ ವರದಿಯ ಪ್ರಕಾರ ಸಣ್ಣ ವ್ಯಾಪಾರಿಗಳು, ದೈನಂದಿನ ಕೂಲಿ ಕಾರ್ಮಿಕರು ಲಾಕ್ಡೌನ್ನಿಂದಾಗಿ ಹೆಚ್ಚು ಹಾನಿಗೊಂಡಿದ್ದಾರೆ. ಎಪ್ರಿಲ್ ತಿಂಗಳಲ್ಲಿ 91.2 ಮಿಲಿಯನ್ ಜನರು ಉದ್ಯೋಗ ಕಳೆದುಕೊಂಡಿದ್ದು , ಒಟ್ಟು 121.5 ಮಿಲಿಯನ್ ನಷ್ಟ ಉಂಟಾಗಿದೆ.
ಸಂಸತ್ನಲ್ಲಿ ಈ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿರ್ಣಯಿಸುವಲ್ಲಿ ಕೇಂದ್ರವು ವಿಫಲವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕೇಂದ್ರ, ತಮಿಳುನಾಡು ಸೇರಿದಂತೆ ದೇಶಾದ್ಯಂತದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು, ಸ್ವ-ಸಹಾಯ ಗುಂಪುಗಳು, ವೈದ್ಯಕೀಯ ಆರೋಗ್ಯ ವೃತ್ತಿಪರರು, ನೈರ್ಮಲ್ಯ ಕಾರ್ಮಿಕರು ಎಲ್ಲರೂ ಕೂಡಾ ಕೊರೊನಾ ಹಾಗೂ ಲಾಕ್ಡೌನ್ ಕಾರಣದಿಂದಾಗಿ ಮಾನವ ಬಿಕ್ಕಟ್ಟಿನ ಸಮಸ್ಯೆಯನ್ನು ಎದುರಿಸಿದೆ ಎಂದು ಹೇಳಿದೆ.
ಕಾರ್ಮಿಕರು ಮನೆಗೆ ಮರಳಲು ಸಹಾಯ ಮಾಡಲು ಭಾರತೀಯ ರೈಲ್ವೆ 4,611 ಕ್ಕೂ ಹೆಚ್ಚು ಶ್ರಮಿಕ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ ಎಂದು ಕೇಂದ್ರವು ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. "63.07 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ ಮತ್ತು ಇತರ ರಾಜ್ಯಗಳಲ್ಲಿರುವ ವಿವಿಧ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕಾರ್ಮಿಕರಿಗೆ ಪ್ರಯಾಣದ ಸಮಯದಲ್ಲಿ ಆಹಾರ ಮತ್ತು ನೀರನ್ನು ಉಚಿತವಾಗಿ ನೀಡಲಾಗಿದೆ" ಎಂದು ಕೂಡಾ ಹೇಳಿದೆ.
ಮೂಲಗಳ ಪ್ರಕಾರ ಮೇ 1 ರಿಂದ ಶ್ರಮಿಕ್ ವಿಶೇಷ ರೈಲುಗಳ ಕಾರ್ಯಾಚರಣೆಯಲ್ಲಿ 110 ವಲಸಿಗರು ರೈಲ್ವೆ ಆವರಣದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ ಹಳಿಗಳಲ್ಲಿಯೂ ಮೃತ ದೇಹಗಳು ಪತ್ತೆಯಾಗಿದ್ದು ಒಂದೆರಡು ಸಾವುಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ ಎಂದು ಕೂಡಾ ವರದಿ ತಿಳಿಸಿದೆ. ಹಾಗೆಯೇ ಆವರು ರೈಲಿನಡಿಗೆ ಬಿದ್ದು ಸಾವನ್ನಪ್ಪಿರಬಹುದು ಎನ್ನಲಾಗಿದೆ.
ಈ ಹಿಂದೆ ಜೂನ್ ತಿಂಗಳಿನಲ್ಲಿ ಕೇಂದ್ರ ಮಾಹಿತಿ ಆಯೋಗವು ವಲಸೆ ಕಾರ್ಮಿಕರು, ಸರ್ಕಾರಿ ಹಾಗೂ ಖಾಸಗಿ ಕೆಲಸಗಾರರು ಜಿಲ್ಲಾವಾರು ಮಾಹಿತಿಯನ್ನು ಸಂಗ್ರಹಿಸುವಂತೆ ಕಾರ್ಮಿಕ ಆಯುಕ್ತರಿಗೆ ನಿರ್ದೇಶನ ನೀಡಿತ್ತು. ಹಾಗೆಯೇ ಈ ಮಾಹಿತಿಯನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು ಎಂದು ಕೂಡಾ ತಿಳಿಸಿತ್ತು.