ಬೆಂಗಳೂರು, ಸೆ. 15 (DaijiworldNews/MB) : ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ಸೇರಿ ಐವರು ಪೊಲೀಸ್ ಅಧಿಕಾರಿಗಳನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲು ಸರ್ಕಾರ ಅನುಮತಿ ನೀಡಿದೆ.
ಇಬ್ಬರು ಐಪಿಎಸ್ ಅಧಿಕಾರಿಗಳಾದ ಅಜಯ್ ಹಿಲೋರಿ ಮತ್ತು ಹೇಮಂತ್ ನಿಂಬಾಳ್ಕರ್ ಜತೆಗೆ ಡಿವೈಎಸ್ಪಿ ಇ.ಬಿ. ಶ್ರೀಧರ್, ಇನ್ಸ್ಪೆಕ್ಟರ್ ಎಂ. ರಮೇಶ್ ಮತ್ತು ಎಸ್ಐ ಗೌರಿಶಂಕರ್ ವಿಚಾರಣೆಗೆ ಅನುಮತಿ ನೀಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ ಸಿಬಿಐ, ಈ ಅಧಿಕಾರಿಗಳು ಐಎಂಎ ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆ ವೇಳೆ ಸಾಕ್ಷಿ ದೊರೆತಿದ್ದು ಈ ಅಧಿಕಾರಿಗಳ ವಿರುದ್ದ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆದಾರರ ಹಿತರಕ್ಷಣೆ ಕಾಯ್ದೆ –2004 (ಕೆಪಿಐಡಿಎಫ್ಇ) ಅಡಿ ಪ್ರಾಸಿಕ್ಯೂಷನ್ ಅನುಮತಿ ನೀಡಬೇಕು ಎಂದು ಕೋರಿತ್ತು.
ಸಿಬಿಐ 2019ರ ಆಗಸ್ಟ್ 30ರಂದು ಈ ಐಎಂಎ ಹಗರಣಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದು ಈ ಫೆಬ್ರವರಿಯಲ್ಲಿ ನಿಂಬಾಳ್ಕರ್ ಹಾಗೂ ಹಿಲೊರಿ ವಿರುದ್ಧವೂ ಎಫ್ಐಆರ್ ದಾಖಲಿಸಿತ್ತು.
ಈ ಅಧಿಕಾರಿಗಳು ಐಎಂಎ ಪರವಾಗಿ ವರದಿ ಸಿದ್ಧಪಡಿಸಿ ಕ್ಲೀನ್ ಚಿಟ್ ನೀಡಿದ್ದನ್ನು ಸಿಬಿಐ ಉಲ್ಲೇಖಿಸಿತ್ತು. ಆರ್ಬಿಐ ಸೂಚನೆ ಮೇರೆಗೆ ಸಿಐಡಿಯಲ್ಲಿ 2018-19ರ ಅವಧಿಯಲ್ಲಿ ಐಜಿಪಿ ಆಗಿದ್ದ ಹೇಮಂತ್ ನಿಂಬಾಳ್ಕರ್ ಅವರು ಐಎಂಎ ವಿರುದ್ಧ ತನಿಖೆ ನಡೆಸಿದ್ದರು. ಆದರೆ ಮನ್ಸೂರ್ ಅಲಿ ಖಾನ್ ಪರವಾಗಿ ವರದಿ ಸಲ್ಲಿಸಿದ್ದು ಐಎಂಎ ಪರವಾಗಿ ಕೆಲಸ ಮಾಡುವಂತೆ ಅಂದಿನ ಉಪವಿಭಾಗಾಧಿಕಾರಿ ಎಲ್. ಸಿ. ನಾಗರಾಜು ಮೇಲೆ ಒತ್ತಡ ಹೇರಿದ್ದರು ಎಂದು ಸಿಬಿಐ ತಿಳಿಸಿದೆ. ಹಾಗೆಯೇ 2017ರ ಜ.1ರಿಂದ 2018ರ ಅ.16ರ ನಡುವೆ ಪೂರ್ವ ವಿಭಾಗದ ಡಿಸಿಪಿ ಅಜಯ್ ಹಿಲೋರಿ ಅವರು ತಮ್ಮ ಅಧಿಕಾರ ದುರುಪಯೋಗ ಮಾಡಿ ಐಎಂಎ ಅಕ್ರಮಗಳನ್ನು ಮುಚ್ಚಿಡಲು ಐಎಂಎ ಕಂಪನಿಯ ನಿರ್ದೇಶಕ ನಿಜಾಮುದ್ದೀನ್ ಮತ್ತು ಇತರರಿಂದ ಹಲವು ಬಾರಿ ಲಂಚ ಪಡೆದಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಮನೆಗೆ ಬೇಕಾದ ಸಾಮಾಗ್ರಿಗಳನ್ನು ಐಎಂಎ ಮೂಲಕ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.