ನವದೆಹಲಿ, ಸೆ. 15 (DaijiworldNews/MB) : ''ಇಡೀ ವಿಶ್ವಕ್ಕೆ ವಲಸೆ ಕಾರ್ಮಿಕರ ಸಾವಿನ ಬಗ್ಗೆ ಗೊತ್ತಿದೆ, ಆದರೆ ಮೋದಿ ಸರ್ಕಾರಕ್ಕೆ ಮಾಹಿತಿಯಿಲ್ಲ'' ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಕೇಂದ್ರಕ್ಕೆ ಟಾಂಗ್ ನೀಡಿದ್ದಾರೆ.
ಕೇಂದ್ರ ಸರ್ಕಾರವು ಸಂಸತ್ ಮುಂಗಾರು ಅಧಿವೇಶನದಲ್ಲಿ ಕೇಳಲಾದ ವಲಸೆ ಕಾರ್ಮಿಕರಿಗೆ ನೀಡಲಾದ ಪರಿಹಾರ, ವಲಸೆ ಕಾರ್ಮಿಕರ ಸಾವಿನ ಬಗ್ಗೆಗಿನ ಅಂಕಿ ಅಂಶ ಹಾಗೂ ಉದ್ಯೋಗ ಕಳೆದುಕೊಂಡವರ ಬಗ್ಗೆಗಿನ ಅಂಕಿ ಅಂಶದ ಪ್ರಶ್ನೆಗೆ ಪ್ರತಿಕ್ರಿಯಿಸಿ, ''ಲಾಕ್ಡೌನ್ ಸಂದರ್ಭದಲ್ಲಿ ಎಷ್ಟು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ ಹಾಗೂ ಎಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ಅಂಕಿ ಅಂಶ ಸರ್ಕಾರದ ಬಳಿ ಇಲ್ಲ. ಹಾಗೆಯೇ ಈ ಅಂಕಿ ಅಂಶ ಇಲ್ಲದ ಕಾರಣ ಪರಿಹಾರ ಪ್ರಶ್ನೆಯು ಉದ್ಭವಿಸುವುದಿಲ್ಲ'' ಎಂದು ಹೇಳಿತ್ತು.
ಇದೀಗ ಈ ವಿಚಾರವಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು, ''ಲಾಕ್ಡೌನ್ ಸಂದರ್ಭ ಎಷ್ಟು ವಲಸೆ ಕಾರ್ಮಿಕರು ಸಾವನ್ನಪ್ಪಿದರು ಹಾಗೂ ಎಷ್ಟು ಜನರು ಉದ್ಯೋಗ ಕಳೆದು ಕೊಂಡಿದ್ದಾರೆ ಎಂದು ಮೋದಿ ಸರ್ಕಾರಕ್ಕೆ ತಿಳಿದಿಲ್ಲ. ನೀವು ಲೆಕ್ಕ ಹಾಕಿಲ್ಲವೆಂದರೆ ಸಾವು ಸಂಭವಿಸಿಲ್ಲವೇ'' ಎಂದು ಪ್ರಶ್ನಿಸಿದ್ದಾರೆ.
ಕಾವ್ಯಾತ್ಮಕವಾಗಿ ಟ್ವೀಟ್ ಮಾಡಿರುವ ಅವರು, ''ನೀವು ಲೆಕ್ಕ ಹಾಕಿಲ್ಲವೆಂದರೆ ಸಾವು ಸಂಭವಿಸಿಲ್ಲವೇ? ಆದರೆ ಈ ಬಗ್ಗೆ ಸರ್ಕಾರಕ್ಕೆ ಯಾವುದೇ ಪರಿಣಾಮ ಬಿರದಿರುವುದು ಖೇದಕರ. ಇಡೀ ಜಗತ್ತೇ ಅವರ ಸಾವನ್ನು ನೋಡಿದೆ. ಆದರೆ ಒಂದು ಮೋದಿ ಸರ್ಕಾರವಿದೆ ಅದಕ್ಕೆ ಇದರ ಬಗ್ಗೆ ಸುದ್ದಿಯೇ ತಿಳಿದಿಲ್ಲ'' ಎಂದು ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.