ಶ್ರೀನಗರ, ಸೆ 15 (DaijiworldNews/PY): ಪಾಕ್ ಸೈನ್ಯ ಈ ವರ್ಷದಲ್ಲಿ ಹದಿನೇಳು ವರ್ಷಗಳ ಅವಧಿಯಲ್ಲೇ ಗರಿಷ್ಠ ಮಟ್ಟದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಜಮ್ಮು-ಕಾಶ್ಮೀರ ವಾಸ್ತವಿಕ ಗಡಿ ರೇಖೆಯಲ್ಲಿ ಮೊದಲ ಎಂಟು ತಿಂಗಳ ಅವಧಿಯಲ್ಲಿ ಸುಮಾರು 3,186 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ.
ಈ ಬಗ್ಗೆ ಸೋಮವಾರ ರಕ್ಷಣಾ ಖಾತೆಯ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಅವರು ಸಂಸತ್ತಿಗೆ ತಿಳಿಸಿದ್ದು, ಜನವರಿ 1ರಿಂದ ಸೆಪ್ಟೆಂಬರ್ 7ರವರೆಗೆ ಪಾಕ್ ಸೈನ್ಯವು ಈ ಉಲ್ಲಂಘನೆ ಮಾಡಿದೆ. ಇದರೊಂದಿಗೆ ಜಮ್ಮು ಭಾಗದ ಭಾರತ- ಪಾಕ್ ಅಂತರಾಷ್ಟ್ರೀಯ ಗಡಿಭಾಗದಲ್ಲಿ 242 ಕ್ರಾಸ್ ಬಾರ್ಡರ್ ಫೈರಿಂಗ್ ಘಟನೆಗಳು ನಡೆದಿವೆ ಎಂದು ಮಾಹಿತಿ ನೀಡಿದ್ದಾರೆ.
ಸೆ.7ರಂದು ಪಾಕ್ ಸೈನ್ಯ ಕದನ ವಿರಾಮ ಉಲ್ಲಂಘಸಿದ್ದು, ಇದರಲ್ಲಿ ಎಂಟು ಯೋಧರು ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದರು. ಪಾಕ್ ಸೈನ್ಯವು ಪ್ರತಿ ಬಾರಿಯೂ ಕದನ ವಿರಾಮ ಉಲ್ಲಂಘನೆ ಮಾಡಿ ದಾಳಿ ನಡೆಸಿದ ಸಂದರ್ಭ ಭಾರತೀಯ ಯೋಧರು ಪ್ರತ್ಯುತ್ತರ ಕೊಟ್ಟಿದ್ದಾರೆ ಎಂದಿದ್ದಾರೆ.