ನವದೆಹಲಿ,ಸೆ.15(DaijiworldNews/HR): ರಾಜ್ಯ ಸಭಾ ಸದಸ್ಯೆ, ನಟಿ ಜಯಾ ಬಚ್ಚನ್ ಮನರಂಜನಾ ವಲಯದಲ್ಲಿಯೇ ಇದ್ದು, ಸಿನಿಮಾ ಕ್ಷೇತ್ರವನ್ನು ಅಪಖ್ಯಾತಿಗೊಳಿಸುತ್ತಿರುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಲೋಕಸಭಾ ಸಂಸದ ಮತ್ತು ಭೋಜ್ಪುರಿ ನಟ ರವಿ ಕಿಶನ್, 'ಸಿನಿಮಾ ಕ್ಷೇತ್ರದಲ್ಲಿ ಡ್ರಗ್ಸ್ ಚಟದ ಸಮಸ್ಯೆ ಇದೆ' ಎಂದಿದ್ದರು. ನಟಿ ಕಂಗನಾ ರಣಾವತ್ ಸಹ ಇತ್ತೀಚೆಗೆ ಬಾಲಿವುಡ್ನ್ನು 'ಚರಂಡಿ' ಎಂದು ಕರೆದಿದ್ದರು. ಆದರೆ, ಯಾರ ಹೆಸರನ್ನೂ ಪ್ರಸ್ತಾಪಿಸದೆಯೇ 'ಅವರಿಗೆ ತುತ್ತು ನೀಡುತ್ತಿರುವ ಕೈಗಳನ್ನೇ ಅವರು ಕಚ್ಚುತ್ತಿದ್ದಾರೆ' ಎಂದು ಜಯಾ ಬಚ್ಚನ್ ಹೇಳಿದ್ದಾರೆ.
ಈ ಬಗ್ಗೆ ರಾಜ್ಯ ಸಭೆಯ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಮಾಧ್ಯಮಗಳಿಂದ ಮನರಂಜನಾ ಉದ್ಯಮವೇ ಶಿಕ್ಷೆಗೆ ಗುರಿಯಾಗಿದೆ, ಸರ್ಕಾರ ಅದನ್ನು ರಕ್ಷಿಸಬೇಕಿದೆ ಹಾಗೂ ಬೆಂಬಲಿಸಬೇಕಿದೆ. ಇನ್ನೂ ಸಿನಿಮಾ ಕ್ಷೇತ್ರವನ್ನು ಚರಂಡಿಗೆ ಹೋಲಿಸಿರುವುದಕ್ಕೆ ಆಕ್ಷೇಪ ಸೂಚಿಸಿದ್ದು, 'ಅದೇ ಕ್ಷೇತ್ರದಲ್ಲಿ ಹೆಸರು ಮಾಡಿದವರು ಈಗ ಅದನ್ನೇ ಚರಂಡಿ ಎಂದು ಕರೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಸಂಸದ ಕಿಶನ್ ಮಾಡಿರುವ ಬಾಲಿವುಡ್ ಡ್ರಗ್ ನಿಯಂತ್ರಣದ ಆರೋಪಗಳಿಗೆ, 'ಅವಮಾನಕಾರಿ ಮತ್ತು ಮುಜುಗರ ತಂದಿದೆ' ಎಂದಿದ್ದಾರೆ. 'ಜಿಸ್ ಥಾಲಿ ಮೇ ಖಾತೆ ಹೈ ಉಸ್ಮೆ ಛೇಡ್ ಕರ್ತೆ ಹೈ. ಗಲತ್ ಬಾತ್ ಹೈ' ಹಿಂದಿಯ ನುಡಿಗಟ್ಟು ಪ್ರಸ್ತಾಪಿಸಿ, ನಿಮಗೆ ತುತ್ತು ನೀಡುತ್ತಿರುವ ಕೈಗಳನ್ನೇ ಕಚ್ಚುತ್ತಿರುವಿರೆಲ್ಲ ಎಂದು ಜಯಾ ಬೇಸರ ವ್ಯಕ್ತಪಡಿಸಿದ್ದಾರೆ.