ಮುಂಬೈ, ಸೆ. 15 (DaijiworldNews/MB) : ಚಿತ್ರರಂಗದಲ್ಲಿ ಡ್ರಗ್ಸ್ ದಂಧೆ ವಿಚಾರಕ್ಕೆ ಸಂಬಂಧಿಸಿ ಸಂಸತ್ತಿನಲ್ಲಿ ಮಾತನಾಡಿ ಮನರಂಜನಾ ವಲಯದಲ್ಲಿಯೇ ಇದ್ದು, ಸಿನಿಮಾ ಕ್ಷೇತ್ರವನ್ನು ಅಪಖ್ಯಾತಿಗೊಳಿಸುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ಯಸಭಾ ಸದಸ್ಯೆ ಆಗಿರುವ ನಟಿ ಜಯ ಬಚ್ಚನ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ಅಭಿಷೇಕ್ ಬಚ್ಚನ್ ನೇಣು ಬಿಗಿದುಕೊಂಡರೆ, ಶ್ವೇತಾ ಬಚ್ಚನ್ಗೆ ಅನ್ಯಾಯವಾದರೆ ಇದೇ ರೀತಿ ಹೇಳುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಮನರಂಜನಾ ವಲಯದಲ್ಲಿಯೇ ಇದ್ದು, ಸಿನಿಮಾ ಕ್ಷೇತ್ರವನ್ನು ಅಪಖ್ಯಾತಿಗೊಳಿಸುತ್ತಿರುವವರ ವಿರುದ್ಧ ಸಂಸತ್ತಿನಲ್ಲಿ ಕಿಡಿಕಾರಿದ್ದ ಜಯಾ ಬಚ್ಚನ್ ಅದೇ ಕ್ಷೇತ್ರದಲ್ಲಿ ಹೆಸರು ಮಾಡಿದವರು ಈಗ ಅದನ್ನೇ ಚರಂಡಿ ಎಂದು ಕರೆಯುತ್ತಿದ್ದಾರೆ. ಅದಕ್ಕೆ ನಾನು ಸಂಪೂರ್ಣ ಅಸಮ್ಮತಿ ಸೂಚಿಸುತ್ತೇನೆ. ತುತ್ತು ನೀಡಿದ ಕೈಯನ್ನೇ ಕೆಲವರು ಕಚ್ಚುತ್ತಾರೆ ಎಂದು ಪರೋಕ್ಷವಾಗಿ ಕಂಗನಾಗೆ ಹೇಳಿದ್ದಾರೆ. ಕಂಗನಾ ಈ ಹಿಂದೆ ಬಾಲಿವುಡ್ನ್ನು ಚರಂಡಿಗೆ ಹೋಲಿಸಿದ್ದರು.
ಈಗ ಜಯಾ ಬಚ್ಚನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಂಗನಾ, ''ಜಯಾ ಜಿ, ನನ್ನ ಸ್ಥಾನದಲ್ಲಿ ನಿಮ್ಮ ಮಗಳು ಇದ್ದಿದ್ದರೆ, ನಿಮ್ಮ ಪುತ್ರಿ ಶ್ವೇತಾ ಬಚ್ಚನ್ ಅವರನ್ನು ಥಳಿಸಿ, ಮಾದಕ ದ್ರವ್ಯ ನೀಡಿ ಕಿರುಕುಳ ನೀಡಿದ್ದರೆ, ಅಭಿಷೇಕ್ ನಿರಂತರವಾಗಿ ಬೆದರಿಸುವಿಕೆ ಹಾಗೂ ಕಿರುಕುಳದ ಬಗ್ಗೆ ದೂರು ನೀಡಿದ್ದರೆ, ಹಾಗೆಯೇ ನೇಣು ಬಿಗಿದುಕೊಂಡರೆ ನೀವು ಅದೇ ಮಾತನ್ನು ಹೇಳುತ್ತೀರಾ?'' ಎಂದು ಪ್ರಶ್ನಿಸಿದ್ದು ''ನಮಗೂ ಸಹಾನುಭೂತಿ ತೋರಿಸಿ'' ಎಂದು ಹೇಳಿದ್ದಾರೆ.