ಬೆಂಗಳೂರು, ಸೆ 15 (DaijiworldNews/PY): ಈ ಬಾರಿ ಕೊರೊನಾದಿಂದಾಗಿ ಆದಾಯ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ಅಭಿವೃದ್ದಿ ಕಾರ್ಯಗಳಿಗಾಗಿ 33,000 ಕೋಟಿ. ರೂ ಸಾಲ ಪಡೆಯಲು ತೀರ್ಮಾನ ಮಾಡಿದೆ.
ಈ ಬಗ್ಗೆ ಮಂಗಳವಾರ ಸಿಎಂ ಬಿಎಸ್ವೈ ಅವರು ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಕಾಯ್ದೆಗೆ ತಿದ್ದುಪಡಿ ಮಾಡಲು ಅನುಮತಿ ನೀಡಲಾಗಿದೆ. ಈ ಮೂಲಕ ವಿವಿಧ ಮೂಲಗಳಿಂದ 33,000 ಕೋಟಿ. ರೂ ಸಾಲ ಪಡೆಯಲಾಗುವುದು. ಅಲ್ಲದೇ, ರಾಜ್ಯಗಳು ಸಾಲ ಪಡೆಯುವ ಪ್ರಮಾನ ಜಿಎಸ್ಡಿಪಿಯನ್ನು ಕೇಂದ್ರವು ಶೇ.5ಕ್ಕೆ ಏರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಜಿಎಸ್ಟಿ ಪರಿಹಾರ 11,000 ಕೋಟಿ ನೀಡಬೇಕು ಎಂದು ರಾಜ್ಯ ಸರ್ಕಾರ ಬೇಡಿಕೆ ಇಟ್ಟಿತ್ತು. ಆದರೆ, ಈ ವಿಚಾರದ್ಲಿ ಯಾವುದೇ ರೀತಿಯಾದ ಬದಲಾವಣೆ ಇಲ್ಲ ಹಾಗೂ ರಾಜಿಯೂ ಮಾಡಿಕೊಂಡಿಲ್ಲ. ಕೊರೊನಾ ಹಿನ್ನೆಲೆ ಸರ್ಕಾರಕ್ಕೆ ವಿವಿಧ ಮೂಲಗಳಿಂದ ಆದಾಯ ಬರಬೇಕಿತ್ತು. ಆದರೆ, ಈ ಆದಾಯ ನಿರೀಕ್ಷಿತ ಮಟ್ಟದಲ್ಲಿ ಸಂಗ್ರಹಣೆಯಾಗಿಲ್ಲ ಎಂದರು.
ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಹೆಚ್ಚುವರಿ ಸಾಲ ನೀಡಲು ಅವಕಾಶ ಕಲ್ಪಿಸಿದೆ. ಆದರೆ, ವರಮಾನ ಕುಸಿತಗೊಂಡಿದೆ. ಹಾಗಾಗಿ ಹೆಚ್ಚುವರಿ ಸಾಲ ಪಡೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.