ಹುಬ್ಬಳ್ಳಿ, ಸೆ.15(DaijiworldNews/HR): ಡ್ರಗ್ಸ್ ದಂಧೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ ಜೊತೆ ತೆಗೆಸಿಕೊಂಡಿದ್ದ ಫೋಟೊಗಳನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದ ಸ್ಥಳೀಯ ಕಾಂಗ್ರೆಸ್ ಮುಖಂಡ ಗಿರೀಶ ಗದಿಗೆಪ್ಪಗೌಡರ ಬಗ್ಗೆ ಮಾಹಿತಿ ಕಲೆ ಹಾಕಲು ಸಿಸಿಬಿ ಪೊಲೀಸರ ತಂಡ ಗೋವಾಕ್ಕೆ ತೆರಳಿದೆ.
ಮಾಹಿತಿ ಸಂಗ್ರಹಿಸಿ ದಾಖಲೆಗಳನ್ನು ಗೋವಾದ ಕ್ಯಾಸಿನೊ ಒಂದರಲ್ಲಿ ಕಲೆಹಾಕಲಾಗುತ್ತಿದೆ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಹುಬ್ಬಳ್ಳಿ– ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿರೀಶ ಗದಿಗೆಪ್ಪಗೌಡರ ಹುಬ್ಬಳ್ಳಿಯಲ್ಲಿ ಕೆಪಿಎಲ್ ಟೂರ್ನಿಯ ವೇಳೆ ರಾಗಿಣಿ ಜೊತೆ ಫೋಟೊಗಳನ್ನು ತೆಗೆಸಿಕೊಂಡಿದ್ದು, ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ವಿವಾದ ಬೆಳಕಿಗೆ ಬರುತ್ತಿದ್ದಂತೆ ಫೋಟೊಗಳನ್ನು ಸಾಮಾಜಿಕ ತಾಣದಿಂದ ಅಳಿಸಿ ಹಾಕಿದ್ದರು. ಈ ಸಂಶಯದಿಂದ ಗಿರೀಶ ಅವರನ್ನು ಸಿಸಿಬಿ ಪೊಲೀಸರು ಎರಡು ದಿನಗಳ ಹಿಂದೆ ವಿಚಾರಣೆ ಮಾಡಿ ಒಂದಷ್ಟು ದಾಖಲೆಗಳನ್ನು ಒದಗಿಸುವಂತೆ ಸೂಚಿಸಿದ್ದರು.